ಬೆಂಗಳೂರು: ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾಜೀ ಅವರನ್ನು ಭೇಟಿ ಮಾಡಿ ಮುಂದೆ ಬರುವ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿಗಳ ವಿಚಾರ ಹಾಗೂ ರಾಜ್ಯಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೇರೆ ಬೇರೆ ವಿಷಯಗಳ ಚರ್ಚೆ ಮಾಡಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು ರಾಜ್ಯಾಧ್ಯಕ್ಷನಾಗಿ ಎಲ್ಲರನ್ನು ಜೊತೆ ಸೇರಿಸಿಕೊಂಡು ಪಕ್ಷವನ್ನು ಮುನ್ನಡೆಸುತ್ತಿರುವ ಕುರಿತು ನಡ್ಡಾಜೀ ಅವರು ಸಂತಸ ಸೂಚಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ಹೊಸ ದಾಖಲೆ ಬರೆಯಲಿದೆ; ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ನಾನು ಭರವಸೆ ನೀಡಿದ್ದೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಎಲ್ಲ ವಿಚಾರಗಳ ಕುರಿತು ರಾಷ್ಟ್ರೀಯ ಅಧ್ಯಕ್ಷರ ಸಮ್ಮುಖದಲ್ಲಿ ಚರ್ಚೆ ಆಗಿದೆ. ಅಭ್ಯರ್ಥಿಗಳ ಕುರಿತು ಅಂತಿಮವಾಗಿ ವರಿಷ್ಠರು ನಿರ್ಣಯ ಮಾಡಲಿದ್ದಾರೆ ಎಂದು ಹೇಳಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಭೇಟಿ ಮಾಡುವ ವೇಳೆ ಅನಿರೀಕ್ಷಿತವಾಗಿ ನಮ್ಮ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರು ಸಿಕ್ಕಿದ್ದರು. ಅವರ ಜೊತೆ ಕುಳಿತು ಚರ್ಚಿಸಿದ್ದೇವೆ. ಅದಕ್ಕೆ ಬಹಳ ವಿಶೇಷತೆ ಅಥವಾ ಬೇರೆ ಅರ್ಥ ಕೊಡುವ ಅಗತ್ಯವಿಲ್ಲ ಎಂದು ಈ ಕುರಿತ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿದರು.
ರಾಧಾಮೋಹನ್ದಾಸ್ ಜೀ ಅವರು ನಮ್ಮ ರಾಜ್ಯದ ಉಸ್ತುವಾರಿಗಳು. ನಿನ್ನೆ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇನೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವತಯಾರಿ ಕುರಿತು ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.