ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಅಧಿವೇಶನ ಆರಂಭಕ್ಕೆ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ವಿವಾದ ಮತ್ತು ಹಗರಣಗಳ ಕಳಂಕ ಮೆತ್ತಿಕೊಂಡಿರುವ ಕಾಂಗ್ರೆಸ್ ಸರ್ಕಾರ ತೊಲಗಿಸುವ ಪಣತೊಟ್ಟರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಬಿಲ್ ಗಳನ್ನು ಬಿಡುಗಡೆ ಮಾಡಲು 40 ಪರ್ಸೆಂಟ್ ಕಮೀಶನ್ ಕೇಳಲಾಗುತ್ತಿದೆ ಎಂದು ಆರೋಪ ಮಾಡಿದ್ದ ಕೆಂಪಣ್ಣ ಈಗ ಅದೇ ಆರೋಪವನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿದ್ದಾರೆ. ಸರ್ಕಾರ ಹಣವನ್ನು ಲೂಟಿ ಮಾಡುತ್ತಿದೆ, ಬರಪರಿಹಾರಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ರೈತರು ಕಂಗಾಲಾಗಿದ್ದಾರೆ ಎಂದು ಅಶೋಕ ಹೇಳಿದರು.
ಕಾವೇರಿ ನದಿ ನೀರನ್ನು ತಮ್ಮ ಸ್ನೇಹಿತ ಸರ್ಕಾರ ನಡೆಸುತ್ತಿರುವ ತಮಿಳುನಾಡುಗೆ ಹರಿಬಿಟ್ಟು ಖಾಲಿ ಮಾಡಿರುವುದರಿಂದ ಬೆಂಗಳೂರು ನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ . ಖಜಾನೆಯನ್ನು ಲೂಟಿ ಮಾಡಿ ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದಿರುವ ಸರ್ಕಾರವನ್ನು ವಿರೋಧ ಪಕ್ಷ ಸುಮ್ಮನೆ ಬಿಡಲ್ಲ ಎಂದು ವಿರೋಧ ಪಕ್ಷದ ನಾಯಕ ಹೇಳಿದರು.