ಬೆಂಗಳೂರು : ನೀರಾವರಿ ಕ್ಷೇತ್ರದ ಅಭಿವೃದ್ಧಿ, ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸುವುದಕ್ಕೆ ಮೊದಲ ಆದ್ಯತೆ. ನಂತರ ರಸ್ತೆ ಅಭಿವೃದ್ದಿಗೆ ಒತ್ತು ನೀಡಲಾಗುವುದಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೃಹತ್ ನೀರಾವರಿ ಹಾಗೂ ಬೆಂಗಳೂರು ಅಭಿವೃದ್ದಿ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ ಬಾಬು ಅವರ “ಭದ್ರಾ ಮೇಲ್ದಂಡೆ ಯೋಜನೆಯ ಮಂದಗತಿ ಕಾಮಗಾರಿಯ ಬಗ್ಗೆ ಪ್ರಶ್ನೆ ಕೇಳಿದಾಗ, “ಭದ್ರಾ ಮೇಲ್ದಂಡೆ ಯೋಜನೆಯ ಅಡಿ ರೂ. 856 ಕೋಟಿ ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಯೋಜನೆ ಹಾದು ಹೋಗುವ ಸಾಕಷ್ಟು ಕಡೆ ಭೂ ಸ್ವಾಧೀನದ ಸಮಸ್ಯೆಯಿದ್ದು, ಅದನ್ನು ಬಗೆಹರಿಸಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಕಾಮಗಾರಿ ಕುಂಠಿತವಾಯಿತು. ಕೇಂದ್ರ ಸರ್ಕಾರ ರೂ.5,300 ಕೋಟಿ ಅನುದಾನ ನೀಡುವಲ್ಲಿ ವಿಳಂಬ ಮಾಡಿರುವ ಕಾರಣ ಹಿನ್ನಡೆಯಾಗಿದೆ” ಎಂದರು.
ಯಗಚಿ ನದಿ ಅಣೆಕಟ್ಟಿನ ಕಾಲುವೆಗಳ ಅಭಿವೃದ್ದಿ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದು, ಈಗಾಗಲೇ 5.5 ಕಿ.ಮೀ.ನಷ್ಟು ಮಣ್ಣನ್ನು ತೆಗೆದಿದ್ದು, 1.5 ಕಿ.ಮೀ.ನಷ್ಟು ಕಾಮಗಾರಿ ಭೂಸ್ವಾಧೀನದ ವಿಚಾರವಾಗಿ ಸ್ಥಗಿತಗೊಂಡಿದೆ. ಎತ್ತಿನಹೊಳೆ ಯೋಜನೆಗೆ ಮಹತ್ವ ನೀಡಿದಂತೆ ಯಗಚಿ ಯೋಜನೆಗೂ ಮೊದಲ ಆದ್ಯತೆ ನೀಡುತ್ತೇವೆ” ಎಂದು ಸೂಚಿಸಿದರು.