ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಮಜಾ ಮಾಡಿ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಹಣ ಕೇಳುತ್ತಿದ್ದಾರೆ ಎಂದು ವಿಜಯಪುರ ಬಿಜಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಬುಧವಾರ ಮಾತನಾಡಿದ ಅವರು, ತೆರಿಗೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ವಾರಂಟಿಯೇ ಇರಲ್ಲ. ಜೆಡಿಎಸ್-ಬಿಜೆಪಿ ಸೀಟ್ ಹಂಚಿಕೆ ಕುರಿತು ಸದ್ಯ ಚರ್ಚೆ ಬೇಡ. ಈ ಬಗ್ಗೆ ಮೈಸೂರಿಗೆ ಬಂದಾಗ ಕೇಂದ್ರ ಸಚಿವ ಅಮಿತ್ ಶಾ ಸೂಚನೆ ನೀಡಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದು ಮಾತ್ರ ನಮ್ಮ ಗುರಿ ಎಂದರು.ಹೋರಾಟಕ್ಕೆ ದುಡ್ಡು ಕೊಟ್ಟು ಕರೆಯುವ ಗಿರಾಕಿಗಳು ನಾವಲ್ಲ. ಇವತ್ತು ಇಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರತಿಭಟನೆ ಆಗಿದೆ. ಸಮಾಜದ ಭವಿಷ್ಯಕ್ಕಾಗಿ ಹೋರಾಟ ಹೊರತು ಯಾರನ್ನೋ ಮುಖ್ಯಮಂತ್ರಿ ಮಾಡಲು ಅಲ್ಲ. ನಾವು ಒಂದು ಸಮಾಜದ ಪರ ಹೋರಾಟ ಮಾಡುತ್ತಿಲ್ಲ. ಎಲ್ಲಾ ಸಮಾಜದ ಧ್ವನಿ ಆಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ವೀರೇಶೈವ, ಲಿಂಗಾಯತರು ಹಿಂದೂಗಳಲ್ಲ ಅಂತ ದಾವಣಗೆರೆಯಲ್ಲಿ ಕೆಲವರು ಹೇಳಿದ್ದು, ಹೋರಾಟವನ್ನು ಹಾಳು ಮಾಡಬೇಕು ಅಂತ ಕೆಲವರು ಸಂಚು ಮಾಡಿದರು. ಹಣ ಕೊಡುತ್ತೇವೆ, ಛಲೋಗಾಡಿ ಕೊಡಿಸುತ್ತೇವೆ ಅಂತ ಕೆಲವು ಮಂತ್ರಿಗಳು ಸ್ವಾಮೀಜಿ ಹತ್ರ ಹೋಗ್ತಾರೆ. ನಮ್ಮ ಸಮಾಜದ ಮಂತ್ರಿಯೇ ಒಬ್ಬ ಹತ್ತು ಕೋಟಿ ಚೆಕ್ ಹಿಡಿದುಕೊಂಡು ಬಂದಿದ್ದರು. ಆಗ, ಹತ್ತು ಕೋಟಿಗೆ ನನ್ನ ಸಮಾಜವನ್ನು ಮಾರಲ್ಲ ಅಂತ ಸ್ವಾಮೀಜಿ ಹೇಳಿದ್ದರು ಎಂದು ತಿಳಿಸಿದರು.