ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಬೇರೆ ಪಕ್ಷದಿಂದ ಆತ್ಮಸಾಕ್ಷಿ ಮತಗಳು ಸಿಗುವ ಭರವಸೆ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಕೇಕ್, ನಾಸಿರ್ ಹುಸೇನ್, ಜಿಸಿ ಚಂದ್ರಶೇಖರ್ ಅವರ ನಾಮ ಪತ್ರ ಸಲ್ಲಿಕೆ ಬಳಿಕ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮೂರು ಜನ ನಾಮಪತ್ರ ಸಲ್ಲಿಸಿದ್ದು, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದೆ. ಮೂರು ಅಭ್ಯರ್ಥಿಗಳು ಆಯ್ಕೆಯಾಗಿ, ರಾಜ್ಯಸಭೆ ಹೋಗಿ ರಾಜ್ಯಕ್ಕೆ ನ್ಯಾಯ ಒದಗಿಸುತ್ತಾರೆ ಎಂದರು.
ಕುಪೇಂದ್ರ ರೆಡ್ಡಿ ಸ್ಪರ್ಧೆ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಯತ್ನ ಮಾಡ್ತಾರೆ. ಅವರ ಪ್ರಯತ್ನ ಅವರು ಮಾಡಲಿ. ನಮ್ಮ ಒಗ್ಗಟ್ಟಿನ ಪ್ರದರ್ಶನ ನಾವು ಮಾಡುತ್ತೇವೆ. 27 ನೇ ತಾರೀಕು ಏನಾಗುತ್ತೆ ಅಂತ ನೋಡ್ತಿರಿ ಎಂದು ತಿಳಿಸಿದರು.
ಜೆಡಿಎಸ್ ವಿಫಲ ಆಗಿರುವುದಕ್ಕೆ ಬಿಜೆಪಿ ಜೊತೆಗೆ ಹೋಗಿದೆ. ಒಟ್ಟಿಗೆ ಸೇರಿ ಹೊಸ ನೆಂಟಸ್ತಿಕೆ ಮಾಡ್ತಿದ್ದು, ಅಲ್ಲಿರುವಂತವರು ಅವರ ಆತ್ಮಸಾಕ್ಷಿ ಮತವನ್ನು ನಮಗೆ ಕೊಡ್ತಾರೆ ಎಂಬ ಭರವಸೆ ಇದೆ. ಮತದಾನ ಆದ ಬಳಿಕ ತಿಳಿಸುತ್ತೇವೆ ಎಂದು ವಿವರಿಸಿದರು.