ಮಂಗಳೂರು: ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದ ಡಿಕೆ ಸುರೇಶ್ ವಿರುದ್ಧವೇ ಸ್ಪರ್ಧಿಸಿದರೂ ಬೇಸರವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ ಮೈದಾನದ ಬಳಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಕುಮಾರಸ್ವಾಮಿ ವಿರುದ್ಧವೇ ಸ್ಪರ್ಧಿಸಿದ್ದವನು ನಾನು. ನನ್ನ ಸಹೋದರನ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಆತನೇ ಗೆದ್ದಿದ್ದು, ಬಿಜೆಪಿ, ಜೆಡಿಎಸ್ ನನ್ನ ಸಹೋದರನ ವಿರುದ್ಧ ಸ್ಪರ್ಧಿಸಿದ್ದಾಗಲೂ ಗೆದ್ದಿದ್ದಾನೆ. ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿ ಅಲ್ಲ, ಹಳ್ಳಿಯ ಸಂಸದ ಎಂದರು.
ರಾಜಕೀಯದಲ್ಲಿ ಯಾವುದೂ ಶಾಶ್ವತ ಹಾಗೂ ಅಸಾಧ್ಯವಲ್ಲ. ರಾಜಕಾರಣ ಸಾಧ್ಯತೆಗಳ ಕಲೆ, ಹೀಗಾಗಿ ಇಲ್ಲಿ ಬದಲಾವಣೆ ವಿಶ್ವಾಸವಿದೆ. ಹೀಗಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡುತ್ತಾ ಇದ್ದೇವೆ. ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ, ಹಾಗಾಗಿ ಸಮಾವೇಶ ಮಾಡುತ್ತಿದ್ದೇವೆ. ಇಲ್ಲಿ ನಿರುದ್ಯೋಗ ಇದೆ, ಇಲ್ಲಿನ ಜನ ಬೇರೆ ಕಡೆ ಉದ್ಯೋಗಕ್ಕೆ ಹೋಗುತ್ತಾ ಇದ್ದಾರೆ ಎಂದು ಸೂಚಿಸಿದರು.
ದೇವೇಗೌಡ, ಕುಮಾರಸ್ವಾಮಿ ನಮ್ಮಲ್ಲಿ ಎಂಪಿ ಆಗಿದ್ದವರು. ಹಳೇ ಎಂಪಿಗಳು ಹಾಗೂ ಈ ಎಂಪಿ ವ್ಯತ್ಯಾಸ ಜನ ನೋಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಯಾರೇ ನಿಂತರೂ ಸ್ವಾಗತಿಸುತ್ತೇವೆ ಎಂದು ಹೇಳಿದರು.