ಬೆಂಗಳೂರು : “ಬೆಂಗಳೂರಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಪ್ರಮುಖ ಯೋಜನೆ ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಧ್ಯದಲ್ಲೇ ಪಾಲಿಕೆ ಬಜೆಟ್ ಮಂಡನೆಯಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ವಿವಿಯ ಜ್ಞಾನಭಾರತಿ ಬಿಪೆಡ್ ಮೈದಾನದಲ್ಲಿ ಭಾನುವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಂಗಳೂರಿನ ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಿಸಲು ನಮ್ಮದೇ ಆದ ಯೋಜನೆಗಳಿದ್ದು, ಬೆಂಗಳೂರಿನಲ್ಲಿ ಮುಂದೆ ಮೆಟ್ರೋ ಹೋಗುವ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ ಎಂದರು.
ಯಶವಂತಪುರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ ಮಾಡಲು ಫೀಸಿಬಲ್ ವರದಿ ಸಿದ್ಧಪಡಿಸಲಾಗುತ್ತಿದ್ದು, ಸುಮ್ಮನಹಳ್ಳಿ, ಗೊರಗೊಂಟೆ ಪಾಳ್ಯ ಸೇರಿದಂತೆ ಇತರ ಕಡೆಗಳಲ್ಲಿ ಈ ಯೋಜನೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ. ಇದುವರೆಗೂ 12 ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮಾಡಿದ್ದು, 20 ಸಾವಿರ ಅಹವಾಲುಗಳನ್ನು ದಾಖಲಾಗಿವೆ ಎಂದು ತಿಳಿಸಿದರು.