ಬೆಂಗಳೂರು: ರಾಜ್ಯ ಸರ್ಕಾರ ವಸತಿ ಶಾಲೆಗಳಲ್ಲಿ ಇದುವರೆಗೂ ಇದ್ದ ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ ಎಂಬ ವಾಕ್ಯವನ್ನು ಜ್ಞಾನ ದೇಗುಲವಿದು, ಧೈರ್ಯದಿಂದ ಪ್ರಶ್ನೆ ಮಾಡಿ ಎಂದು ಮಕ್ಕಳ ಮನಸಲ್ಲಿ ಸಂಘರ್ಷ ಮೂಡಿಸುವ ಕೆಲಸ ಮಾಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರವೂ ಸಮಾಜದಲ್ಲಿ ಮಕ್ಕಳಿಂದ ಹಿಡಿದು ಎಲ್ಲರಲ್ಲಿಯೂ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಸರ್ಕಾರದ ವಸತಿ ಶಾಲೆಗಳಲ್ಲಿ ಅಕ್ಕಿ ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಾವು ಖಜಾನೆ ಖಾಲಿ ಇದೆ ಅಂತ ಹೇಳುತ್ತಿದ್ದೇವೆ. ಅಭಿವೃದ್ಧಿಗೆ ಹಣ ಕೊಡುವುದಿಲ್ಲ. ಹಸಿವು ಮುಕ್ತ ಕರ್ನಾಟಕ ಅಂತ ಬೋರ್ಡ್ ಹಾಕಿಕೊಂಡಿದ್ದಾರೆ. ಮೊದಲು ನಿಮ್ಮ ಶಾಲಾ ಮಕ್ಕಳಿಗೆ ಅನ್ನ ಕೊಡಿ, ವಿದ್ಯೆ ಕೊಡಿ ಎಂದು ತಿಳಿಸಿದರು.
ಬಡವರಿಗೆ ಅಕ್ಕಿಯನ್ನು ನರೇಂದ್ರ ಮೋದಿ ಸರ್ಕಾರ ಕೊಡುತ್ತಿದೆ. ಅದನ್ನೂ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ನೀಡುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.