ಹುಬ್ಬಳ್ಳಿ: ನನ್ನ ಮಗನಿಗೆ ಟಿಕೆಟ್ ಕೊಡಲೇಬೇಕು ಎಂದು ನಾನು ಒತ್ತಾಯಿಸಿಲ್ಲ, ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಅವನು ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ನನ್ನ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಸಹ ಟಿಕೆಟ್ ಕೇಳಿರಲಿಲ್ಲ, ಜಿಲ್ಲೆಯ ಮುಖಂಡರು, ಸೂಕ್ತ ಅಭ್ಯರ್ಥಿ ಅಂದಾಗ ಚೆನ್ನರಾಜ್ ಅಖಾಡಕ್ಕಿಳಿದ್ದು, ಪ್ರತಿಕೂಲ ವಾತಾವರಣದಲ್ಲಿಯೂ ಗೆದ್ದು ಬಂದರು, ನನ್ನ ಮಗನೂ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಕೊಟ್ಟಿದ್ದಾನೆ. ಟಿಕೆಟ್ ಕೊಡಲೇಬೇಕು ಅಂತ ನಾನು ಎಲ್ಲಿಯೂ ಒತ್ತಾಯಿಸಿಲ್ಲ, ಹೈಕಮಾಂಡ್ ಮತ್ತು ಜಿಲ್ಲೆಯ ಮುಖಂಡರ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.
ಧಾರವಾಡ ಲೋಕಸಭಾ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಅಂತಿಮವಾಗಲಿದ್ದು, ನಮ್ಮ ಎದುರಾಳಿ ಪ್ರಹ್ಲಾದ್ ಜೋಶಿ, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಜೋಶಿ ಹಿಂದೆ ನಾಲ್ಕು ಬಾರಿ ಆಯ್ಕೆಯಾದವರು, ಕೇಂದ್ರದಲ್ಲಿ ಸಚಿವರಾದವರು, ಅವರನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತೇವೆ ಎಂದು ಸೂಚಿಸಿದರು.