ಕಲಬುರಗಿ: ಈಚೆಗೆ ಹುಟ್ಟಿದ ಮುಗುವಿನಿಂದ ಹಿಡಿದು 16 ವರ್ಷದೊಳಗಿನ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಯು ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಹೃದಯ ಮತ್ತು ನರರೋಗಕ್ಕೆ ಸಂಬಂಧಿಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು ಎಂದು ಮಾಹಿತಿ ತಿಳಿದು ಬಂದಿದೆ.
ಈ ಸಮಯದಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಅವರಲ್ಲಿ 170 ಮಕ್ಕಳ ಪೈಕಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿರುವ ಆತಂಕಕಾರಿ ವಿಷಯ ಬಯಲಿಗೆ ಬಂದಿದ್ದು, 90 ಮಕ್ಕಳ ಪೈಕಿ 41 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೆಂದು ಕಲಬುರಗಿ ಡಿಎಚ್‌ಓ ಡಾ. ರತಿಕಾಂತ್‌ಸ್ವಾಮಿ ತಿಳಿಸಿದರು.
ಮಕ್ಕಳಲ್ಲಿ ಹೃದಯಸಂಬಂಧಿ ಕಾಯಿಲೆ ಕಾಣಿಸುತ್ತಿರುವುದು ಹೊಸ ವಿಚಾರ ಏನಿಲ್ಲ. ಈ ಹಿಂದಿನಿಂದಲೂ ಕೂಡ ಈ ಕಾಯಿಲೆ ಮಕ್ಕಳಲ್ಲಿ ಕಾಣಿಸುತ್ತಾ ಬಂದಿದೆ. ಆದರೆ, ಪೋಷಕರು ಮಕ್ಕಳನ್ನ ತಪಾಸಣೆ ಮಾಡಿಸದ ಪರಿಣಾಮ ಕಾಯಿಲೆ ಪತ್ತೆಯಾಗಿರಲಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಸಾಮಾನ್ಯವಾಗಿ ತಾಯಿಯ ಹೊಟ್ಟೆಯಲ್ಲಿರುವಾಗಲೇ ಕೆಲವು ಮಕ್ಕಳಿಗೆ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತವೆ, ಹೀಗೆ ಕಾಯಿಲೆ ಕಂಡು ಬಂದ ಮಕ್ಕಳಿಗೆ ಚಿಕಿತ್ಸೆಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದೆಂದು ಜಿಲ್ಲಾಧಿಕಾರಿ ಕೂಡ ಭರವಸೆ ನೀಡಿದರು.