ಬಾಗಲಕೋಟೆ,: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಪೊಲೀಸ್ ಸಿಬ್ಬಂದಿ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಚಾರಕ್ಕೆ ಯಾರಾದರೂ ಹೀಗೆ ಮಾಡಿರಬಹುದು. ದಯಾಮರಣ ಅಂದರೆ ನಗಬೇಕು ಅಷ್ಟೆ ಎಂದು ಕಾನೂನು ಸಚಿವ ಹೆಚ್ಕೆ ಪಾಟೀಲ್ ಹೇಳಿದರು.
ಬದಾಮಿ ತಾಲೂಕು ಹೂಲಗೇರಿ ಗ್ರಾಮದಲ್ಲಿ ಇಂದು (ಫೆ.24) ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ ಮತ್ತು ಬಸವಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾನೆ ಕಾರ್ಯಮದಲ್ಲಿ ಭಾಗಿಯಾಗಿ, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೇಕೆ ಪತ್ರ ಬರಿಬೇಕು? ಗೃಹ ಸಚಿವರ ಬಳಿ ಹೋಗಿದ್ದರೆ, ವರ್ಗಾವಣೆ ಕೆಲಸ ಆಗುತ್ತಿತ್ತು. ಇನ್ನು ಈ ಬಗ್ಗೆ ಅಧಿವೇಶನದಲ್ಲೂ ಯಾರು ಪ್ರಸ್ತಾಪ ಮಾಡಿಲ್ಲ ಎಂದರು.
ಲೋಕಸಭೆ ಚುನಾವಣೆ ಸಂಬಂಧ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಇನ್ನೂ 10-15 ದಿನದೊಳಗಾಗಿ ಪಟ್ಟಿ ಹೊರ ಬೀಳುತ್ತದೆ ಎಂದು ತಿಳಿಸಿದರು.
ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿ ವಿಧಾನ ಪರಿಷತ್ನಲ್ಲಿ ತಿರಸ್ಕೃತವಾದ ವಿಚಾರವಾಗಿ ಮಾತನಾಡಿದ ಅವರು, ಆ ವಿಧೇಯಕ ಹಿಂದೂ ದೇವಸ್ಥಾನಗಳಿಗೆ ಮಾರಕವಾಗಿಲ್ಲ. ಇದ್ದ ಕಾನೂನನ್ನೇ ತಿದ್ದುಪಡಿ ಮಾಡುತ್ತಿದ್ದೇವೆ. ಏನು ತಿದ್ದುಪಡಿ ಮಾಡಿದ್ದೇವೆ ಅಂತ ಮುಜರಾಯಿ ಸಚಿವರು ಹೇಳುತ್ತಾರೆ. ಆದರೆ ಬಿಜೆಪಿಯವರು ಕಾನೂನನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದರು.