ರಾಮನಗರ: ಮಂಡ್ಯ ಲೋಕಸಭೆ ಚುನಾವಣೆಯ ಎನ್‌ಡಿಎ ಮೈತ್ರಿ ಟಿಕೆಟ್ ಜೆಡಿಎಸ್ ಪಕ್ಷಕ್ಕೆ ಖಚಿತವಾಗಿದ್ದು, ಈ ಹಿನ್ನೆಲೆ ಅಗತ್ಯ ಸಿದ್ಧತೆ, ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇವೆ ಎಂದು ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ತಿಳಿಸಿದರು.
ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಟಿ ದೇವೇಗೌಡ ಅವರು, ” ಜೆಡಿಎಸ್‌ಗೆ ಮಂಡ್ಯ ಟಿಕೆಟ್ ಖಚಿತವಾಗಿರುವುದರಿಂದ, ಮಂಡ್ಯ ಸ್ಥಳೀಯ ನಾಯಕರ ಸಭೆ ಮಾಡಿ ಚುನಾವಣೆಗೆ ಸಿದ್ಧತೆ ಮಾಡ್ತಿದ್ದೇವೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ ” ಎಂದರು.
ಮಂಡ್ಯ ಟಿಕೆಟ್‌ಗಾಗಿ ಸಂಸದೆ ಸುಮಲತಾ ಅಂಬರೀಶ್ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿಟಿ ದೇವೇಗೌಡ ಅವರು, ಸುಮಲತಾರವರು ಅಧಿಕೃತ ಬಿಜೆಪಿ ಮೆಂಬರ್ ಅಲ್ಲ.ಆದರೂ, ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಮಂಡ್ಯ ಕೇಳಿದರೆ ಬೆಂಗಳೂರು ನಾರ್ತ್ ಕೊಡಬಹುದು ಎಂಬ ಲೆಕ್ಕಾಚಾರ ಇರಬಹುದಿದ್ದು, ನನಗೂ ಕೆಲವರು ಈ ಬಗ್ಗೆ ಹೇಳ್ತಿದ್ದಾರೆ. ಆದರೆ, ಅಭ್ಯರ್ಥಿ ಯಾರೆಂದು ಇನ್ನೂ ನಿರ್ಧಾರ ಆಗಿಲ್ಲ ಎಂದು ತಿಳಿಸಿದರು.
ಬಿಡದಿ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಶಾಸಕ ಪುಟ್ಟರಾಜು ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆ ಸಂಬಂಧ ಸಭೆ ಮಾಡ್ತಿದ್ದೀವೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಚುನಾವಣೆ ಬಗ್ಗೆ ಸಭೆ ಇದಾಗಿದ್ದು, ನೂರಕ್ಕೆ ಸಾವಿರ ಭಾಗ ಹಾಸನ ಮತ್ತು ಮಂಡ್ಯ ಮೊದಲ ಹಂತದಲ್ಲೇ ಇತ್ಯರ್ಥವಾಗಲಿದೆ ಎಂದು ತಿಳಿಸಿದರು.