ಮಂಗಳೂರು: ತಾಯ್ನಾಡಿನ ಸರಕಾರದಿಂದ ಬಹಳಷ್ಟು ಅಪೇಕ್ಷಿಸಿದರೂ ಪದೇ ಪದೇ ನಿರ್ಲಕ್ಷ್ಯ, ನೆರವು ಸಿಗದೆ ಕಂಗಾಲಾಗಿದ್ದ ಅನಿವಾಸಿ ಭಾರತೀಯ ಕನ್ನಡಿಗರಿಗೆ ಪ್ರಥಮ ಬಾರಿಗೆ ರಾಜ್ಯ ಸರಕಾರ ಶಕ್ತಿ ಕೇಂದ್ರದಲ್ಲೇ ನಡೆಸಿದ ಚರ್ಚೆ ಬಹಳಷ್ಟು ಭರವಸೆ ಮೂಡಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ವಿಧಾನಸಭೆ ಬಜೆಟ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅನಿವಾಸಿ ಕನ್ನಡಿಗರ ಬಗ್ಗೆ ಸುಮಾರು 15 ನಿಮಿಷ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರು. ಇದಕ್ಕೂ ಮೊದಲು ಅನಿವಾಸಿಗರ ನಿಯೋಗ ಸಿಎಂ ಸೇರಿದಂತೆ ಸಚಿವರು, ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
”ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಪರಿಹಾರ ನೀಡಲು 2008ರಲ್ಲಿ ಎನ್‌ಆರ್‌ಐ ಫೋರಂ ರಚಿಸಿದ್ದೆವು. ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದಾಗ ಅನಿವಾಸಿ ಕನ್ನಡಿಗರ ನಿಯೋಗವು ಕೇರಳ ಮಾದರಿಯಲ್ಲಿಎನ್‌ಆರ್‌ಐ ಸಚಿವಾಲಯ ರಚಿಸಲು ಮನವಿ ಮಾಡಿತ್ತು. ಮುಂದಿನ ದಿನಗಳಲ್ಲಿ ಅದನ್ನು ಮಾಡಲು ನಮ್ಮ ಸರಕಾರ ಬದ್ಧವಿದೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.