ಬಾಗಲಕೋಟೆ
ಕಷ್ಟಪಟ್ಟು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಬೇಕಾದರೆ ರೈತರು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ತೋಟಗಾರಿಕೆ ಇಲಾಖೆ ಮತ್ತು ಕ್ಯಾಪೆಕ್ ಜಂಟಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಖರೀದಿದಾರರ ಹಾಗೂ ಮಾರಾಟಗಾರರ ನಡುವಿನ ಅಂತರ ದೂರವಿತ್ತು. ಇದರಿಂದ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಮಧ್ಯವರ್ತಿಗಳು ಕಡಿಮೆ ಬೆಳೆಗೆ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರಿಂದ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯುತ್ತಿರಲಿಲ್ಲ ಎಂದರು.
ರೈತರು ಬೆಳೆದ ಹಣ್ಣುಗಳಾಗಿರಲಿ, ತರಕಾರಿ ಆಗಿರಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರೀದಿದಾರರ ಮತ್ತು ಮಾರಾಟಗಾರರ ನೇರ ಸಂಪರ್ಕ ಕಲ್ಪಿಸುವ ಕೆಲಸ ಸರಕಾರ ಮಾಡುತ್ತಿದೆ. ಇದರಿಂದ ಬೆಳೆಗೆ ತಕ್ಕಂತೆ ಮಾರಾಟ ಮಾಡಲು ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶದ ವ್ಯಾಪ್ತಿ ಹೆಚ್ಚಿಗೆ ಇದ್ದು, ಈ ಭಾಗದ ರೈತರಿಗೆ ಹಲವಾರು ಕಂಪನಿಗಳ ಜೊತೆ ಒಪ್ಪಂದ ಮಾಡುವ ಮೂಲಕ ಖರೀದಿದಾರರ ಬೆಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಮಾರಾಟ ಮಾಡಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಇದೆ. ಉತ್ತಮ ಹವಾಮಾನ, ನೀರು ಇದ್ದು, ಉತ್ತಮ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಆದರೆ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದಕ್ಕೆ ಕಾರಣ ಮಾರುಕಟ್ಟೆಯ ಕೌಶಲ್ಯತೆ ಕೊರತೆ. ರೈತ ಸಾಕಷ್ಟು ಶ್ರಮವಹಿಸಿ ಬೆಳೆಯನ್ನು ಬೆಳೆಯುತ್ತಾರೆ. ಅದನ್ನು ಮಾರುಕಟ್ಟೆಗೆ ತರಲು ಮಾರುಕಟ್ಟೆಯ ಕೌಶಲ್ಯತೆ ಅರಿವು ಅಗತ್ಯವಾಗಿದೆ. ರೈತರನ್ನು ಖಾಸಗಿ ಮಾರುಕಟ್ಟೆಗೆ ಸಂಪರ್ಕ ಮಾಡಿದಾಗ ಮಾತ್ರ ಉತ್ತಮ ಮಾರುಕಟ್ಟೆಯ ಮೌಲ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಮಾತನಾಡಿ ತೋಟಗಾರಿಕೆ ಬೆಳೆಗಳಿಗೆ ೧೯೮೦ ರಿಂದ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದಕ್ಕೆ ಪೂರಕವಾಗಿ ಸರಕಾರ ರಾಷ್ಟ್ರೀಯ ತೋಟಗಾರಿಕೆ ಮಿಷನ್ ೨೦೦೫ ರಲ್ಲಿ ಬಂದು ಹಲವಾರು ಯೊಜನೆಗಳನ್ನು ರೂಪಿಸಿಕೊಂಡು ರೈತರಿಗೆ ಪೂರಕವಾದ ವಾತಾವರಣ ಸೃಷ್ಠಿಸಿ, ಕಲೆಕ್ಷನ್ ಕ್ರೇಡಿಟ್ ಲಿಂಕೆಜ್ ಮಾಡಿ ರೈತರಿಗೆ ಬೆಳೆಯನ್ನು ಬೆಳೆಯಲು ಅನುಕೂಲ ಮಾಡಿಕೊಡಲಾಯಿತು. ಆದರೆ ರೈತರು ಬೇಡಿಕೆಗೆ ಅನುಸಾರವಾಗಿ ಬೆಳೆ ಬೆಳೆದಲ್ಲಿ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನ ಅಪರ ನಿರ್ದೇಶಕ ಡಾ.ಪಿ.ಎಂ.ಸೊಬರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿತ್ತು. ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಅಧಿಕಾರಿಗಳು ಉತ್ಪನ್ನಗಳನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿವಿಯ ಡೀನ್ ಡಾ.ಲಕ್ಷ್ಮೀ ನಾರಾಯಣ ಹೆಗಡೆ, ಕ್ಯಾಪೆಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್.ಬಂಥನಾಳ, ಜಂಟಿ ಕೃಷಿ ನಿರ್ದೇಶಕ ಲಕ್ಷö್ಮಣ ಕಳ್ಳೇನವರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ, ಲಾಲ್‌ಬಾಗ್‌ನ ಉಪನಿರ್ದೇಶಕಿ ಶಮಾ ಪಾಟೀಲ, ತೋವಿವಿಯ ಪ್ರೊ.ವಸಂತ ಗಾಣಿಗೇರ, ತೋಟಗಾರಿಕೆ ಸಹಾಯಕ ನಿರ್ದೇಶಕ ಬಸಪ್ಪ ಬೇನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.