ಬಾಗಲಕೋಟೆ:
ನಾಡಿನ ಹಿರಿಯ ಪತ್ರಕರ್ತರು ಹಾಗೂ ಬಾಗಲಕೋಟೆಯ ರಾಮ ಮನಗೂಳಿ (64) ಇಂದು ಅನಾರೋಗ್ಯದಿಂದ ಕೆರೂಡಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ನಾಲ್ಕೂವರೆ ದಶಕದಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದರು. ಪತ್ನಿ,ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ರಾಮ ಮನಗೂಳಿ ಅವರು ಸಂಯುಕ್ತ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕರು, ಹಾಗೂ ನಾಡನುಡಿ ದಿನ ಪತ್ರಿಕೆಯ ಸಂಪಾದಕರಾಗಿದ್ದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ದರು ,
ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದರು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗೆ ಇವರು ಭಾಜನರಾಗಿದ್ದರು.
2002 ರಲ್ಲಿ ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಬಾಗಲಕೋಟೆ ಯಲ್ಲಿ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಟ್ಟರು.
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರೆಸ್ ಕ್ಲಬ್ ವತಿಯಿಂದ ಅವರ ನೇತೃತ್ವದಲ್ಲಿ ಬೆಳಗಾವಿ ವಿಭಾಗಮಟ್ಟದ ಪತ್ರಕರ್ತರ ಕಾರ್ಯಾಗಾರ ನಡೆಸಿದ್ದು ವಿಶೇಷವಾಗಿತ್ತು.
ನಾಡಿನ ಹಿರಿಯ ಪತ್ರಕರ್ತರಾಗಿದ್ದ ರಾಮ ಮನಗೂಳಿ ಅವರು ಪತ್ರಕರ್ತರಿಗೆ ಸದಾ ಮಾರ್ಗದರ್ಶನ ನೀಡುವ ಜತೆಗೆ , ಕಾರ್ಯನಿರತ ಪತ್ರಕರ್ತರ ಸಂಘಟನೆಗೂ ಹೆಚ್ಚು ಒತ್ತು ನೀಡುತ್ತಿದ್ದರು,
ಸಂಘಟನೆಗೆ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಯಾವುದೇ ಚುನಾವಣೆ ನಡೆಸದಂತೆ ಎಲ್ಲರೊಂದಿಗೆ ಮಾತನಾಡಿ ಅವಿರೋಧ ಆಯ್ಕೆ ಆಗುವಂತೆ ನೋಡಿಕೊಳ್ಳುತ್ತಿದ ಅವರ ಕೆಲಸ ಎಲ್ಲರಿಗೂ ಮೆಚ್ಚುಗೆ ಆಗಿತ್ತು.
ಇನ್ನೂ ಪತ್ರಕರ್ತರಿಗೆ ಯಾರಿಗೆ ಸಮಸ್ಯೆಯಾದರೆ ತಕ್ಷಣ ಸ್ಪಂದಿಸುವ ಜತೆಗೆ ಸಹಾಯ ಮಾಡುವ ಮನೋಭಾವ ಹೊಂದಿದ್ದರು.
ಪ್ರತಿಯೊಂದ ಪಕ್ಷದ ರಾಜಕಾರಣಿಗಳ ಜತೆಗೆ ಒಳ್ಳೆಯ ಆತ್ಮೀಯತೆ ಹೊಂದಿದ್ದರು.
ರಾಮ ಮನಗೂಳಿ ಅವರು ನೇರವಾಗಿ ತಮ್ಮ ಲೇಖನಿ ಮೂಲಕ ಬರೆಯುತ್ತಿದ್ದರು. ಯಾವುದೇ ರಾಜಿ ಇಲ್ಲದೇ ಇದ್ದಿದ್ದನ್ನು ಇದ್ದಂಗೆ ಬರವಣಿಗೆ ಮೂಲಕ ಬೆಳಕು ಚೆಲ್ಲುತ್ತಿದ್ದರು.
ಹಿರಿಯ ಪತ್ರಕರ್ತರಾದ ರಾಮ ಮನಗೂಳಿ ಅವರ ನಿಧನಕ್ಕೆ ಬಾಗಲಕೋಟ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.