ಬೆಂಗಳೂರು: ಬರ ನಿರ್ವಹಣೆ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದಿಂದ ಬರ ಪರಿಹಾರ ನಿಧಿ ಇದುವರೆಗೆ ಬಿಡುಗಡೆಯಾಗದಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡರು ಎಂದು ಮಾಹಿತಿ ತಿಳಿದು ಬಂದಿದೆ.
ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ನಿಧಿ ಬಿಡುಗಡೆ ಮಾಡುವಂತೆ ನಾವು ಕೇಳುವ ರೀತಿ ಸರಿಯಿಲ್ಲ ಎಂದು ಅಶೋಕ ಹೇಳುತ್ತಾರೆ. ಸರಿ, ನಮ್ಮ ರೀತಿ ಸರಿಯಿಲ್ಲ, ನಿಮ್ಮ ನೇತೃತ್ವದಲ್ಲಿ ಹೋಗಿ ಕೇಂದ್ರದ ನಾಯಕರನ್ನು ಭೇಟಿಯಾಗೋಣ ಅಂತ ಹೇಳಿದರೆ ಅಶೋಕ ಅವರಿಂದ ಪ್ರತಿಕ್ರಿಯೆ ಇಲ್ಲ ಎಂದು ತಿಳಿಸಿದರು.
ತಾವು ಖುದ್ದು ದೆಹಲಿಗೆ ತೆರಳಿ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿದ್ದಾಗಿದೆ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೋಗಿ ಮನವಿ ಮಾಡಿದ್ದಾರೆ, ಶಿವಕುಮಾರ್ ಚಲುವರಾಯಸ್ವಾಮಿ ಮತ್ತು ಕೃಷ್ಣ ಭೈರೇಗೌಡ ಜೊತೆಯಾಗಿ ತೆರಳಿ ಕೇಂದ್ರದ ನಾಯಕರನ್ನು ಭೇಟಿಯಾಗಿದ್ದಾರೆ, ಆದರೆ ಬರ ಪರಿಹಾರ ಮಾತ್ರ ಇನ್ನೂ ಮರೀಚಿಕೆಯಾಗಿದೆ ಎಂದರು.
ಬಿಜೆಪಿಯೊಂದಿಗೆ ಜೆಡಿಎಸ್ ಸೇರಿಕೊಂಡಿದೆ. ಕುಮಾರಸ್ವಾಮಿ ಸರ್ಕಾರದ ಅಪ್ರೋಚ್ ಸರಿಯಿಲ್ಲ ಎನ್ನುತ್ತಾರೆ. ಇವರ ಅಪ್ರೋಚ್ ಸರಿಯಿದ್ದರೆ ಹೋಗಿ ಬಿಡುಗಡೆ ಮಾಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು.