ಹುಬ್ಬಳ್ಳಿ : ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಕ್ಕೆ ಜಗದೀಶ ಶೆಟ್ಟರ್ ಸದ್ಯದಲ್ಲಿಯೇ ಪಶ್ಚಾತಾಪದ ಹೇಳಿಕೆ ನೀಡಲಿದ್ದಾರೆ. ಇನ್ನೊಂದು ತಿಂಗಳು ಕಾದು ನೋಡಿ ಅವರಿಂದ ಪಶ್ಚಾತಾಪದ ಹೇಳಿಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇವಲ ಇಬ್ಬರು ಮೂವರಲ್ಲ ಬಿಜೆಪಿಯಿಂದ ಅನೇಕ ಜನ ಕಾಂಗ್ರೆಸ್‌ಗೆ ಆಗಮಿಸಲಿದ್ದಾರೆ. ಇಡಿ ಪ್ರಕರಣ ರದ್ದಾಗಿರುವ ಬಗ್ಗೆ ಮಾತನಾಡಿ, ಇಡಿ ದಾಳಿಯಾದಾಗ ಒಂದು ರೀತಿ, ಬಂಧನ ಆದಾಗ ಒಂದು ರೀತಿ ತೋರಿಸ್ತೀರಿ. ಈಗ ಸುಮ್ಮನೇ ಇದೀರಾ ಎಂದು ಮಾಧ್ಯಮದವರನ್ನು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಪಾಕ್ ಪರ ಘೋಷಣೆ ವಿಚಾರದಲ್ಲಿ ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ನಾಯಕರ ಆಗ್ರಹಕ್ಕೆ ಪ್ರತಿಕ್ರಿಯಿಸಿ, ಯಾವಾಗ ಬೇಕಂತೆ ರಾಜೀನಾಮೆ ಕೊಡೋಣ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ರು. ಅವರನ್ನು ಯಾಕೆ ಬಂಧನ ಮಾಡಲಿಲ್ಲ? ರಾತ್ರೋ ರಾತ್ರಿ ಮುಚ್ಚಾಕಿ ಬಿಟ್ರು. ಬಿಜೆಪಿಯವರು ಕೇಸರಿ ಶಾಲು ಹಾಕಿ ಘೋಷಣೆ ಕೂಗಿದ್ದಾರೆ. ಬಿಜೆಪಿಯವರಿಗೆ ಬದ್ಧತೆ ಇದೆಯಾ? ನಾವು ಘೋಷಣೆ ಕೂಗಿದವರ ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ವಿಚಾರದ ಬಗ್ಗೆ ಮಾತನಾಡಿ, ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಾರ್ಚ್ 7ರಂದು ದಿಲ್ಲಿಯಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆಯ ನಂತರ ಕಾಂಗ್ರೆಸ್ ಟಿಕೆಟ್ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ಸೂಚಿಸಿದರು.