ಬೆಂಗಳೂರು: ರಾಜ್ಯದಲ್ಲಿ ಜೀವಜಲದ ವಿವೇಚನಾರಹಿತ ಬಳಕೆಯು ಮಿತಿ ಮೀರಿದ್ದು, 44 ತಾಲೂಕುಗಳಲ್ಲಿ ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡಲಾಗಿದೆ ಎಂದು ರಾಜ್ಯ ಅಂತರ್ಜಲ ನಿರ್ದೇಶನಾಲಯದ ಮೌಲೀಕರಣ ವರದಿ ಹೇಳಿದೆ.ರಾಜ್ಯದ ಅಂತರ್ಜಲ ಸ್ಥಿತಿಗತಿ ಕುರಿತು ಕೇಂದ್ರ ಅಂತರ್ಜಲ ಮಂಡಳಿಯ ಸಹಭಾಗಿತ್ವದಲ್ಲಿ 234 ತಾಲೂಕುಗಳಲ್ಲಿಅಧ್ಯಯನ ನಡೆಸಿರುವ ಅಂತರ್ಜಲ ನಿರ್ದೇಶನಾಲಯ, ಅಂತರ್ಜಲ ಮಟ್ಟ ದಿನೇದಿನೇ ತಳ ಸೇರುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಅಂತರ್ಜಲದ ಸಂರಕ್ಷಣೆಗೆ ಆದ್ಯತೆ ನೀಡದೆ ಇದ್ದರೆ ಭವಿಷ್ಯದಲ್ಲಿ ರಾಜ್ಯವು ಭೀಕರ ಜಲಕ್ಷಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.ವರದಿ ಪ್ರಕಾರ, ಬಹುತೇಕ ಜಿಲ್ಲೆಗಳಲ್ಲಿ ಅಂತರ್ಜಲ ಮಿತಿ ಮೀರಿ ಬಳಕೆಯಾಗಿದೆ. ಕೃಷಿಗೆ ಅತಿಯಾಗಿ ಅಂತರ್ಜಲ ಬಳಸುತ್ತಿರುವುದು, ದಿನದಿಂದ ದಿನಕ್ಕೆ ಅರಣ್ಯ ಪ್ರದೇಶ ಕುಗ್ಗುತ್ತಿರುವುದು, ವಾಡಿಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣಕ್ಕೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ ಈಗ ಅಂತರ್ಜಲ ಹೊರ ತೆಗೆಯುವಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.
ರಾಜ್ಯದ ಅಂತರ್ಜಲ ಬಳಕೆ ಸರಾಸರಿಯು ಶೇ 66.26ರಷ್ಟಿದೆ. ಅಂತರ್ಜಲವು ಕಳವಳಪಡುವ ಮಟ್ಟಕ್ಕೆ ಇಳಿದಿದೆ.ರಾಜ್ಯದ ವಾರ್ಷಿಕ ಅಂತರ್ಜಲ ಮರುಪೂರಣ ಪ್ರಮಾಣವು 18.93 ಬಿಲಿಯನ್ ಕ್ಯೂಬಿಕ್ ಮೀಟರ್ (ಬಿಸಿಎಂ) ಇದ್ದು, ಈ ಪೈಕಿ 17.08 ಬಿಸಿಎಂನಷ್ಟು ಅಂತರ್ಜಲವನ್ನು ಬಳಕೆ ಮಾಡಬಹುದು. ವಾರ್ಷಿಕವಾಗಿ ಸದ್ಯ 11.32 ಬಿಸಿಎಂನಷ್ಟು ಅಂತರ್ಜಲ ಹೊರ ತೆಗೆಯಲಾಗುತ್ತಿದೆ. ಮುಖ್ಯವಾಗಿ ಕೃಷಿ ಉದ್ದೇಶಕ್ಕೆ ವಿವೇಚನಾರಹಿತವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೇ 89.15ರಷ್ಟು ಅಂತರ್ಜಲ ಬಳಸಲಾಗುತ್ತಿದೆ.