ಬೆಂಗಳೂರು: ಸೈಬರ್ ಅಪರಾಧಗಳು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ರಾಜ್ಯದಲ್ಲಿ ಇದನ್ನು ನಿಯಂತ್ರಿಸಲು ಶೀಘ್ರ ಸೈಬರ್ ಸುರಕ್ಷತಾ ನೀತಿ ಜಾರಿಗೆ ತರಲಾಗುವುದು, ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.
ರಾಜ್ಯ ಪೊಲೀಸ್ ಇಲಾಖೆ, ಸಿಐಡಿ ಹಾಗೂ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ‘ಸೈಬರ್ ಅಪರಾಧ ತನಿಖಾ ಶೃಂಗ ಸಭೆ- 2024’ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಬಹುತೇಕ ವಲಯಗಳಲ್ಲಿ ಡಿಜಿಟಲ್ ಸೇವೆಗಳು ಹೆಚ್ಚಾಗಿದ್ದು, ಇದಕ್ಕೆ ಪೂರಕವಾಗಿ ನಾಗರಿಕರು ಸೈಬರ್ ಭದ್ರತೆ ಕುರಿತು ಅರಿತುಕೊಳ್ಳಬೇಕಿದೆ. ಬೆಂಗಳೂರಿನಲ್ಲಿಅತಿಹೆಚ್ಚು ಐಟಿ-ಬಿಟಿ ಕಂಪನಿಗಳಿದ್ದು, ಸೈಬರ್ ಸುರಕ್ಷತೆಗೆ ಹಲವು ಕ್ರಮಗಳು ಅನಿವಾರ್ಯವಾಗಿದೆ ಎಂದರು.
ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಸೈಬರ್ ಸುರಕ್ಷತಾ ನೀತಿ ಜಾರಿಗೊಳಿಸಲಿದ್ದು, ಈ ಕುರಿತು ಪ್ರಕ್ರಿಯೆಗಳು ಪ್ರಗತಿಯಲ್ಲಿವೆ, ಎಂದು ತಿಳಿಸಿದರು.ಸರಕಾರದ ಹಲವು ಇಲಾಖೆಗಳು ಜನರಿಗೆ ಸುಲಭವಾಗಿ ಸೇವೆ ಒದಗಿಸಲು ಡಿಜಿಟಲ್ ಮೊರೆ ಹೋಗುತ್ತಿದ್ದು, ಸೇವಾ ಸಿಂಧು, ಮೊಬೈಲ್ ಬ್ಯಾಂಕಿಂಗ್, ವರ್ಚುವಲ್ ಕ್ಲಾಸ್‌ಗಳೂ ಸೇರಿದಂತೆ ವಿವಿಧ ರೀತಿಯ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 43 ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳು, ಸೈಬರ್ ವಂಚನೆಗೊಳಗಾದ ಜನರಿಗೆ ಸುರಕ್ಷತೆ ಒದಗಿಸುವ ಕೆಲಸ ಮಾಡುತ್ತಿವೆ. ಸೈಬರ್ ಅಪರಾಧಕ್ಕೆ ದತ್ತಾಂಶವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದೇ ಪರಿಹಾರ. ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು, ಎಂದು ಹೇಳಿದರು.