ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಕಣಿವೆ ಪ್ರದೇಶಕ್ಕೆ ಇವತ್ತು ಭೇಟಿ ನೀಡುತ್ತಿದ್ದು ಅವರನ್ನು ಸ್ವಾಗತಿಸಲು ಇಡೀ ಜಮ್ಮು ಮತ್ತು ಕಾಶ್ಮೀರದ ಜನ ರಸ್ತೆಗಳ ಮೇಲೆ ನೆರೆದಂತೆ ಕಾಣುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಜನ ಖುಷಿಯಿಂದ ಬೀಗುತ್ತಿದ್ದು, ಮತ್ತು ಮೋದಿಯವರನ್ನು ಕಾಣಲು ಇನ್ನಿಲ್ಲದ ಕಾತುರತೆಯಿಂದ ಕಾಯುತ್ತಿದ್ದಾರೆ. ಎಲ್ಲ ಸಮುದಾಯ ಮತ್ತು ವರ್ಗಗಳ ಜನರನ್ನು ದೃಶ್ಯಗಳಲ್ಲಿ ನೋಡಬಹುದು. ಪಹೆಲ್ಗಾಂವ್ ನಿಂದ ಶ್ರೀನಗರ್ ಗೆ ಬಂದಿರುವ ಕಾಶ್ಮೀರಿಗಳು ನಾವು ಶಾಂತಿದೂತ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಸ್ವಾಗತ ಬಯಸುತ್ತೇವೆ, ಅವರು 370 ವಿಧಿಯನ್ನು ತೆಗೆದುಹಾಕಿದ ಬಳಿಕ 70 ವರ್ಷಗಳಿಂದ ಕಾಣೆಯಾಗಿದ್ದ ಶಾಂತಿ ಈಗ ನೆಲೆಸಿದೆ ಮತ್ತು ನಾವೆಲ್ಲ ಸೌಹಾರ್ದತೆಯಿಂದ ಬದುಕು ನಡೆಸುತ್ತಿದ್ದೇವೆ ಎನ್ನುತ್ತಿದ್ದಾರೆ.
ಬೇರೆ ಬೇರೆ ಕಡೆಗಳಿಂದ ಮುಸ್ಲಿಂ ಸಮುದಾಯದ ಕಾಶ್ಮೀರಿಗಳು ‘ಮೋದಿ ಸಾಬ್ ಜಿಂದಾಬಾದ್’ ಎಂದು ಕೂಗುತ್ತಿದ್ದಾರೆ. ಕಾಶ್ಮೀರಿ ಪಂಡಿತರು ಮತ್ತು ಅಲ್ಲಿ ವಾಸವಾಗಿರುವ ಇತರ ಸಮುದಾಯಗಳ ಜನ ‘ಹರ್ ಹರ್ ಮೋದಿ ಘರ್ ಘರ್ ಮೋದಿ’ ಅಂತ ಘೋಷಣೆ ಕೂಗುತ್ತಿದ್ದಾರೆ. ಪ್ರಧಾನಿ ಮೋದಿಯವರು ಇಂದು ಶ್ರೀನಗರದ ಭಕ್ಷಿ ಸ್ಟೇಡಿಯಂನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಲಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.