ಹುಬ್ಬಳ್ಳಿ: ಧಾರವಾಡ ಜಿಲ್ಲೆ ಸದ್ಯಕ್ಕೆ ಸಂಪೂರ್ಣ ಮಹಿಳೆಯರ ಆಡಳಿತದಲ್ಲಿರುವುದು ವಿಶೇಷ. ಹಲವಾರು ನಿರ್ಣಾಯಕ ಉನ್ನತ ಹುದ್ದೆಗಳಲ್ಲಿ ಪ್ರಮಿಳೆಯರೇ ವಿರಾಜಮಾನರಾಗಿದ್ದು, ಜಿಲ್ಲೆಯ ಪರಮೋಚ್ಚ ಹುದ್ದೆ ಜಿಲ್ಲಾಧಿಕಾರಿ ಸ್ಥಾನದಲ್ಲಿಯೂ ದಿವ್ಯಪ್ರಭು ಜಿಆರ್‌ಜೆ ಇದ್ದಾರೆ. ಇವರು ಒಂದೇ ಪ್ರಯತ್ನದಲ್ಲಿಐಎಎಸ್ ಪರೀಕ್ಷೆ ತೇರ್ಗಡೆಯಾದ ಪ್ರವೀಣೆ. ಹೆಚ್ಚುವರಿ ಡಿಸಿಯಾಗಿ ಗೀತಾ ಸಿ.ಡಿ. ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಯಲ್ಲಿ ಡಾ.ಶಶಿ ಪಾಟೀಲ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಯಾಗಿ ಡಾ.ಸುಜಾತಾ ಹಸವಿಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿಯಾಗಿ ಪದ್ಮಾವತಿ ಜಿ. ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಕಾನೂನು ಕ್ಷೇತ್ರದಲ್ಲಿ ಕೆ.ಜಿ.ಶಾಂತಿ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದಾರೆ.
ಸಾರಿಗೆ ಇಲಾಖೆಯ ಎನ್‌ಡಬ್ಲ್ಯು ಕೆಆರ್‌ಟಿಸಿಯಲ್ಲಿ ದೇವಕ್ಕಾ ನಾಯಕ, ರೋಹಿಣಿ ಬೇವಿನಕಟ್ಟಿ, ಮಹೇಶ್ವರ ಬೈಲಪತ್ತಾರ ಎನ್ನುವವರು ಡಿಪೊ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ‘‘ಮಹಿಳೆಯರು ಉನ್ನತ ಸ್ಥಾನದಲ್ಲಿದ್ದರೆ ಭ್ರಷ್ಟಾಚಾರ ಕಡಿಮೆ ಇರುತ್ತದೆ, ಇತರ ಮಹಿಳಾ ಸಿಬ್ಬಂದಿಗೂ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅನುಕೂಲವಾಗುತ್ತದೆ’’ ಎನ್ನುತ್ತಾರೆ ಡಿಪೊ ಮ್ಯಾನೇಜರ್ ದೇವಕ್ಕಾ ನಾಯಕ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿರುವ ರೇಣುಕಾ ಸುಕುಮಾರ ಅತ್ಯಂತ ದಕ್ಷ, ಖಡಕ್ ಅಧಿಕಾರಿ.
ಅವಳಿ ನಗರದ ಶಾಂತಿ, ಸುರಕ್ಷತೆ ಜತೆಗೆ ರೌಡಿಸಂ ಮಟ್ಟ ಹಾಕಲು ಪಣ ತೊಟ್ಟಿದ್ದಾರೆ.ಹು-ಧಾ ಮೇಯರ್ ಹುದ್ದೆಯಲ್ಲಿ ವೀಣಾ ಬರದ್ವಾಡ, ಮಹಾನಗರ ಪಾಲಿಕೆ ಪ್ರತಿ ಪಕ್ಷ ನಾಯಕಿ ಹುದ್ದೆಯಲ್ಲಿ ಸುವರ್ಣಾ ಕಲ್ಲಕುಂಟ್ಲಾ, ಜಿಲ್ಲಾಪಂಚಾಯಿತಿ ಸಿಇಒ ಸ್ಥಾನದಲ್ಲಿ ಸ್ವರೂಪ ಟಿ.ಕೆ. ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.