ಮಂಡ್ಯ : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಭಾಗವಾಗಿ ದಳಪತಿಗಳಿಗೆ ಯಾವ ಕ್ಷೇತ್ರ ಸಿಗಲಿದೆ ಎನ್ನುವ ಸಣ್ಣ ಸುಳಿವನ್ನೂ ಬಿಜೆಪಿಯ ಕೇಂದ್ರ ನಾಯಕರಾಗಲಿ ಅಥವಾ ದಳಪತಿಗಳಾಗಲಿ ಇದುವರೆಗೆ ಬಿಟ್ಟುಕೊಟಿಲ್ಲ. ಮಂಡ್ಯದಿಂದ ಬಿಜೆಪಿ ಸ್ಪರ್ಧಿಸಲಿದೆಯೋ, ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲಿದ್ದಾರೋ ಎನ್ನುವ ಗೊಂದಲ ಹಾಗೇ ಮುಂದುವರಿದಿದೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಜ್ಯ ಬಿಜೆಪಿ ನಾಯಕರಿಗೂ ಮಂಡ್ಯದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇದ್ದಂತಿಲ್ಲ. ಇದರಿಂದ, ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೇ ಹೇಳಿಕೆಗಳು ಬಿಜೆಪಿ ನಾಯಕರಿಂದ ಬರುತ್ತಿದೆ. ಆದರೆ, ಸುಮಲತಾ ಅಂತೂ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.ಈ ನಡುವೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೀಡಿರುವ ಹೇಳಿಕೆ, ಸುಮಲತಾಗೆ ಟಿಕೆಟ್ ಕೈತಪ್ಪುವ ಸುಳಿವನ್ನು ನೀಡಿದೆಯೇ ಎಂದು ಅನುಮಾನಿಸುವಂತಾಗಿದೆ ಎಂದರು.
ಮಂಡ್ಯದ ಸಂಸದೆ ಬಿಜೆಪಿಗೆ ಬೆಂಬಲ ನೀಡಿದ್ದಾರೆಯೇ ಹೊರತು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ” ಎಂದು ಅಶೋಕ್ ಹೇಳಿರುವುದು ನಾನಾ ಊಹಾಪೋಹಗಳಿಗೆ ಆಸ್ಪದ ನೀಡಿದೆ.ಸುಮಲತಾ ಅವರು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಹೇಳಿರುವುದು ಅವರಿಗೆ ಬಿಟ್ಟ ವಿಚಾರ. ಅವರ ಬಗ್ಗೆ ಮಾತನಾಡಲು ನಾನ್ಯಾರು ” ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸುಮಲತಾ ಅವರು ನೇರವಾಗಿ ದೆಹಲಿಯ ನಾಯಕರ ಜೊತೆಯೇ ಟಿಕೆಟಿಗಾಗಿ ಮಾತುಕತೆ ನಡೆಸುತ್ತಿರುವುದು ರಾಜ್ಯದ ಕೆಲವು ನಾಯಕರಿಗೆ ಪಥ್ಯವಾಗುತ್ತಿಲ್ಲ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.