ರಾಮನಗರ: ಲೋಕಸಭೆ ಚುನಾವಣೆಗೆ ಸಿ.ಎನ್.ಮಂಜುನಾಥ್ ಅವರನ್ನೇ ನಿಲ್ಲಿಸಬೇಕು ಎಂದು ನನ್ನ ಮೇಲೆ ಬಿಜೆಪಿ ಹೈಕಮಾಂಡ್ ಒತ್ತಾಸೆ ಇದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ತಿಳಿಸಿದರು.
ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪ್ರಮುಖ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು,ಸಿ.ಎನ್.ಮಂಜುನಾಥ್ ಅವರನ್ನೇ ನಿಲ್ಲಿಸಬೇಕು ಎಂದು ನನ್ನ ಮೇಲೆ ಬಿಜೆಪಿ ಹೈಕಮಾಂಡ್ ಒತ್ತಾಸೆ ಇದ್ದು, ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರು ಎಲ್ಲರೂ ಮಂಜುನಾಥ್ ಅವರನ್ನೇ ಒಮ್ಮತ ಅಭ್ಯರ್ಥಿ ಮಾಡಬೇಕು ಎಂದು ಬಯಸಿದ್ದಾರೆ.ಅವರು ನಿಲ್ಲಬೇಕೋ ಬೇಡವೋ ಎನ್ನುವ ತೀರ್ಮಾನವನ್ನು ಮುಖಂಡರಾದ ನಿಮಗೆ ಬಿಡುತ್ತೇನೆ ಎಂದರು.
ನಾನು ಹೇಳಿರುವುದು ಸಿ.ಪಿ.ಯೋಗೇಶ್ವರ್ ಅವರ ಹೆಸರನ್ನು. ಅವರನ್ನು ಅಭ್ಯರ್ಥಿ ಮಾಡಿ ಎಂದಿದ್ದು, ಸಿ.ಪಿ.ಯೋಗೇಶ್ವರ್ ಅವರು ಕೂಡ ಮಂಜುನಾಥ್ ಅವರೇ ನಿಲ್ಲಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಮಿತ್ರ ಪಕ್ಷದ ವರಿಷ್ಠರು, ರಾಜ್ಯದ ಬಿಜೆಪಿ ನಾಯಕರ ಭಾವನೆಗಳನ್ನು ನಾವು ಗೌರವಿಸಬೇಕಿದ್ದು, ಭಾನುವಾರ ನಾನು ನಮ್ಮ ತಂದೆಯವರ ಜತೆ ಎರಡು ಗಂಟೆ ಕಾಲ ಚರ್ಚೆ ಮಾಡಿದೆ. ಮಂಜುನಾಥ್ ಅವರ ಸ್ಪರ್ಧೆ ವಿಚಾರವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.
ನನ್ನ ತಂಗಿ ಮನೆಯಲ್ಲಿ ಕಣ್ಣೀರು ಹಾಕ್ತಾ ಇದಾಳೆ, ನಮ್ಮನ್ನು ಯಾಕೆ ರಾಜಕೀಯಕ್ಕೆ ಎಳೆಯುತ್ತಿರಿ, ನೆಮ್ಮದಿಯಿಂದ ಇದ್ದು, ನಮಗೆ ರಾಜಕೀಯ ಬೇಡ ಅಂತ ಅಳ್ತಾ ಕೂತಿದ್ದಾಳೆ. ಇದು ನಮ್ಮ ಮನೆಯ ಪರಿಸ್ಥಿತಿ. ನನ್ನ ನೋವು ನನಗೇ ಗೊತ್ತು. ಆದರೆ, ಆ ಕಿರಾತಕರನ್ನು ಮಣಿಸಲೇಬೇಕು. ಇದು ನನ್ನ ಗುರಿ, ಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ ಎಂದು ನಿಮಗೆ ಮನವಿ ಮಾಡುತ್ತೇನೆ ಎಂದು ಸೂಚಿಸಿದರು.
ರಾಮನಗರ ಕ್ಷೇತ್ರದ ಜನರು ಯಾವತ್ತೂ ಜಾತಿ ಮೇಲೆ ಚುನಾವಣೆ ಮಾಡಿದವರಲ್ಲ. ನಾನೆಂದೂ ಗುತ್ತಿಗೆದಾರರಿಂದ ಹಣ ಕೇಳಿದವನಲ್ಲ, ಚುನಾವಣೆ ಅದ ಮೇಲೆ ನಾನು ಊರುಗಳಲ್ಲಿ ಜಗಳ ತಂದಿಡಲಿಲ್ಲ.ನಿಮ್ಮಲ್ಲಿ ಒಬ್ಬನಾಗಿ ಪಕ್ಷಕ್ಕೆ ದುಡಿಮೆ ಮಾಡಿದ್ದೇನೆ. ಇವತ್ತು ಕಾಂಗ್ರೆಸ್ ನವರು ಯಾವ ರೀತಿ ನಡೆದುಕೊಳ್ಕುತ್ತಿದ್ದಾರೆ. ನಾನು ಯಾವ ರೀತಿ ನಡೆದುಕೊಂಡಿದ್ದೇನೆ ಎಂದು ವಿಶ್ಲೇಷಿಸಿದರು.