ಮೈಸೂರು: `2014 ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂಥಾ ಹೈ ಕಮಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ರಿ ಎಂದು ಕೇಳಿರಲಿಲ್ಲ. ಈಗಲೂ ಅಷ್ಟೇ ಯಾಕೆ ತಪ್ಪಿಸಿದ್ದೀರಿ ಅಂಥಾ ನಾನು ಕೇಳಿಯೂ ಇಲ್ಲ, ಅವರು ಹೇಳಿಯೂ ಇಲ್ಲ. ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದಲ್ಲಿರುವವರಿಗು ದ್ರೋಹ ಮಾಡಲ್ಲ.”ಇದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಸ್ಪಷ್ಟನುಡಿಯಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಮಾಧ್ಯಮ ಸಂವಾದದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತಗೆ ಭಾಗಿಯಾದ ಅವರು ಈ ಹಿಂದೆ ಹೇಳಿದಂತೆಯೇ ಯದುವೀರ್ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ಆಫರ್ ಇತ್ತು ಇಲ್ವಾ ಎಂಬ ಯಾವ ಪ್ರಶ್ನೆಗಳು ಈಗ ಪ್ರಸ್ತುತ ಅಲ್ಲ. ನಮಗೆ ಯದುವೀರ್ ಅವರನ್ನು ಗೆಲ್ಲಿಸುವುದಷ್ಟೇ ಈಗ ಮುಖ್ಯ. ದೇಶಕ್ಕೆ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಮೈಸೂರಿನಿಂದ ಒಬ್ಬ ವ್ಯಕ್ತಿ ಬೇಕು. ಇದಷ್ಟೇ ನಮಗೆ ಮುಖ್ಯ. ಪಕ್ಷ ನನಗೆ ತಾಯಿ ಇದ್ದಾಗೆ. ಇದು ಬರಿ ಬಾಯಿ ಮಾತಲ್ಲ. ಇದು ನನ್ನ ಮನಸಿನ ಮಾತು ಎಂದು ಹೇಳಿದರು.
ಯದುವೀರ್ ಅವರನ್ನು ಪಕ್ಷ ಅಭ್ಯರ್ಥಿ ಮಾಡಿದೆ. ನಾವು ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ರಾಜರಾಗಿ ನಾಡಿಗೆ ಪರಿಚಯ ಆಗಿದ್ದರೂ ಅಭ್ಯರ್ಥಿಯಾಗಿ ಮನವರಿಕೆ ಮಾಡಿಕೊಡಬೇಕು. ಇದು ತುಂಬಾ ದೊಡ್ಡ ಕ್ಷೇತ್ರ. ಕಡಕೊಳದಿಂದ ಕರ್ಕಿ 200 ಕಿ.ಮೀ. ಹೋಗಬೇಕು. ಜನರನ್ನು ತಲುಪಲು ಮಾಧ್ಯಮ ಮಾಖ್ಯ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.