ಬೆಂಗಳೂರು: ನೀರಿನ ಅಭಾವದ ಹಿನ್ನೆಲೆಯಲ್ಲಿ ಬೀನ್ಸ್, ಕ್ಯಾರೆಟ್ ತುಟ್ಟಿಯಾಗಿದೆ. ಬೇಗ ಬಾಡುವ ಸೊಪ್ಪುಗಳು, ಬಾಳೆಹಣ್ಣು ಅಗ್ಗವಾಗಿವೆ.
ಶುಷ್ಕ ವಾತಾವರಣವಿರುವುದರಿಂದ ಸೊಪ್ಪು ಉತ್ತಮ ಇಳುವರಿ ಬರುತ್ತಿದೆ. ಕೊಳೆರೋಗದ ಬಾಧೆಯಿಲ್ಲ. ಬಹುತೇಕ ಸೊಪ್ಪುಗಳು ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುತ್ತಿದೆ. ಪಾಲಕ್, ಪುದಿನ ಮತ್ತಿತರ ಸೊಪ್ಪುಗಳು ಕಂತೆಗೆ 15-20 ರೂ. ನಂತೆ ಸಿಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಬಿಸಿಲು ಹೆಚ್ಚಾಗಿರುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುತ್ತದೆ. ಜತೆಗೆ ಎರಡು ದಿನ ಇಟ್ಟರೆ ಹಣ್ಣಿನ ಸಿಪ್ಪೆ ಕಪ್ಪಾಗುತ್ತದೆ.ಮಾರಾಟಗಾರರು ಹಣ್ಣು ತಾಜಾ ಆಗಿದ್ದಾಗ 50-60 ರೂ.ಗೆ ಏಲಕ್ಕಿ ಬಾಳೆ ಮಾರಾಟ ಮಾಡಿದರೆ, ನಂತರ 40-50 ರೂ.ಗೆ ಕೆಜಿ. ಮಾರಾಟ ಮಾಡುತ್ತಿದ್ದಾರೆ. ಹಾಪ್‌ಕಾಮ್ಸ್‌ನಲ್ಲಿ ಏಲಕ್ಕಿ ಬಾಳೆ 52 ರೂ., ಪಚ್ಚಬಾಳೆ 32 ರೂ., ಚಂದ್ರಬಾಳೆ ದರ 68 ರೂ. ದರವಿದೆ.
ನುಗ್ಗೆಕಾಯಿ ದರ ಭಾರೀ ಇಳಿಕೆಯಾಗಿದೆ. ಕೆ.ಜಿ.ಗೆ 100-150 ರೂ. ವರೆಗೆ ಇರುತ್ತಿದ್ದ ನುಗ್ಗೆಕಾಯಿ ದರ ಈಗ 45ಕ್ಕೆ ಇಳಿದಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿಈ ಮೊದಲು ಕೋಡಿಗೆ 10-15 ರೂ. ದರ ವಿಧಿಸುತ್ತಿದ್ದರು. ಈಗ 5ರಿಂದ 6 ರೂ. ಗೆ ಒಂದು ಕೋಡು ನುಗ್ಗೆ ಸಿಗುತ್ತಿದೆ.
”
ವಾತಾವರಣದಲ್ಲಿಶುಷ್ಕತೆ ಹೆಚ್ಚಾಗಿದೆ. ಹೀಗಾಗಿ, ತರಕಾರಿ ಬೆಳೆಗಳಲ್ಲಿನ ಹೂ, ಕಾಯಿಗಳು ಉದುರುತ್ತವೆ. ನೀರಿನ ಅಭಾವ ಹಲವೆಡೆ ಕಾಡುತ್ತಿದೆ. ಹೀಗಾಗಿ ಕೆಲ ತರಕಾರಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ,” ಎಂದು ಕೆ.ಆರ್.ಮಾರುಕಟ್ಟೆಯ ವ್ಯಾಪಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.