ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಅರೆಸೇನಾ ಪಡೆ ಭದ್ರತೆ ಒದಗಿಸಬೇಕು ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಬೇಡಿಕೆ ಇಟ್ಟಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹಾಗೂ ಮಂಜುನಾಥ್ ನಡುವಣ ಸ್ಪರ್ಧೆಯಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೃದಯದ ಚಿಕಿತ್ಸೆಗಾಗಿ ಚೆನ್ನೈಗೆ ತೆರಳುವುದಕ್ಕೂ ಮುನ್ನ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆ ಭದ್ರತೆಗಾಗಿ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜಿಸುವಂತೆ ಕೇಂದ್ರ ಸರ್ಕಾರದ ಬಳಿ ಬೇಡಿಕೆ ಇಡುತ್ತೇನೆ. ಇಲ್ಲ ಅಂದರೆ ಈ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆ ನಡೆಯಲಾರದು ಎಂದು ಹೇಳಿದರು.
ಡಿಕೆ ಸಹೋದರರ ಈ ತಂತ್ರಗಳಿಗೆಲ್ಲ ನಾವು ಹೆದರುವುದಿಲ್ಲ. ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಪೊಲೀಸ್ ದಬ್ಬಾಳಿಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಕಾಂಗ್ರೆಸ್ ಪಕ್ಷದಿಂದ ಸೀರೆ, ಕುಕ್ಕರ್ ಹಂಚಿಕೆ ನಡೆದಿದೆ. ಹಣ ಮತ್ತು ತೋಳ್ಬಲದಿಂದ ಚುನಾವಣೆಗೆಲ್ಲಲು ಡಿಕೆ ಸಹೋದರರು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.