ದಾವಣಗೆರೆ : ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹೊನ್ನಾಳಿ ಅಸೆಂಬ್ಲಿ ಕ್ಷೇತ್ರದಿಂದ ಸೋತಾಗಿನಿಂದಲೂ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟಿಗಾಗಿ ಪೈಪೋಟಿ ನಡೆಸುತ್ತಿದ್ದ ಎಂ.ಪಿ.ರೇಣುಕಾಚಾರ್ಯ ಅವರಿಗೆ ನಿರಾಸೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಪಟ್ಟಿ ಘೋಷಣೆಯಾದ ಕೂಡಲೇ ದೊಡ್ಡ ಮಟ್ಟದಲ್ಲಿ ಅಸಮಾಧಾನವನ್ನು ರೇಣುಕಾಚಾರ್ಯ ಹೊರಹಾಕಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ದಾವಣಗೆರೆ ಟಿಕೆಟಿಗಾಗಿ ಹಾಲೀ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತೆ ಪ್ರಯತ್ನಿಸುತ್ತಿದ್ದು, ಟಿಕೆಟ್ ಕೈತಪ್ಪುವ ಸಾಧ್ಯತೆಯನ್ನು ಅರಿತ ಸಿದ್ದೇಶ್ವರ ತಮ್ಮ ಸಹೋದರನಿಗೆ ಟಿಕೆಟ್ ಪ್ರಯತ್ನಿಸುತ್ತಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿತ್ತು. ಆ ಮೂಲಕ, ಸಿದ್ದೇಶ್ವರ ಕುಟುಂಬ ಸತತವಾಗಿ ಎಂಟು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಅನ್ನು ತಮ್ಮ ಮನೆತನದಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು.
ನಾವು ಪಕ್ಷಕ್ಕೆ ಬೆಂಕಿಯಲ್ಲ, ನಮ್ಮ ಭಾವನೆಗಳನ್ನು ಹೇಳಿಕೊಳ್ಲುವುದರಲ್ಲಿ ತಪ್ಪೇನಿದೆ. ನಾವು ಪಕ್ಷ ವಿರೋಧಿ ಕೆಲಸವನ್ನು ಮಾಡುತ್ತಿಲ್ಲ, ಮೋದಿ, ಶಾ, ನಡ್ಡಾ, ಯಡಿಯೂರಪ್ಪನವರ ವಿರುದ್ದ ಹೇಳಿಕೆಯನ್ನು ನೀಡುತ್ತಿಲ್ಲ. ನಮಗೆ ನೋವಾಗಿದೆ, ನಮ್ಮನ್ನು ಕಡೆಗಣಿಸಲಾಗಿದೆ, ಹಾಗಾಗಿ ನಮ್ಮ ಭಾವನೆಗಳನ್ನು ಬಹಿರಂಗವಾಗಿ ಹೇಳಿದ್ದೇವೆ ಎಂದು ರೇಣುಕಾಚಾರ್ಯ ಸ್ಪಷ್ಟ ಪಡಿಸಿದ್ದಾರೆ.
ಟಿಕೆಟಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದ ರೇಣುಕಾಚಾರ್ಯ ಇದರಿಂದ ಭ್ರಮನಿರಸನಗೊಂಡಿದ್ದರು. ಯಡಿಯೂರಪ್ಪನವರ ಆಪ್ತರಾಗಿದ್ದರೂ ಟಿಕೆಟ್ ಕೈತಪ್ಪಿದ್ದರಿಂದ, ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕಿದ್ದರು. ಇದರಿಂದ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದ್ದರಿಂದ, ದೆಹಲಿಯಿಂದಲೇ ಯಡಿಯೂರಪ್ಪ ಅವರಿಗೆ ವಾರ್ನಿಂಗ್ ನೀಡಿದ್ದರು. ಈಗ, ಅಜ್ಞಾತ ಸ್ಥಳದಲ್ಲಿ ಸಭೆ ಸೇರಿ ಮುಂದಿನ ನಿರ್ಧಾರಕ್ಕೆ ಬರುವ ತೀರ್ಮಾನವನ್ನು ರೇಣುಕಾಚಾರ್ಯ ಮಾಡಿದ್ದಾರೆ.
ಪಕ್ಷದಿಂದ ಉಚ್ಚಾಟನೆ ಮಾಡುತ್ತೇನೆ ಎಂದು ಯಡಿಯೂರಪ್ಪ ನನಗೆ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದದ್ದು. ನಾನು ಮತ್ತೆ ಹೇಳುತ್ತಿದ್ದೇನೆ, ಪಕ್ಷ ವಿರೋಧಿ ಚಟುವಟಿಕೆಯನ್ನು ನಾನು ಮಾಡಿಲ್ಲ. ದೇಶಕ್ಕೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಪ್ರಾರ್ಥನೆ ಮಾಡಿದವರಲ್ಲಿ ನಾನೂ ಒಬ್ಬ. ಜನರಿಂದ ಜನರಿಗೋಸ್ಕರ ರಾಜಕೀಯ ಮಾಡುವವರು ನಾವು ಎಂದು ರೇಣುಕಾಚಾರ್ಯ ಹೇಳಿದ್ದಾರೆ.