ಕೊಪ್ಪಳ: ಲೋಕಸಭೆ ಚುನಾವಣೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಕೆಲವರಿಗೆ ಟಿಕೆಟ್ ಮಿಸ್ ಆಗಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಪೈಕಿ ಕೊಪ್ಪಳದ ಬಿಜೆಪಿ ಹಾಲಿ ಸಂಸದ ಕರಡಿ ಸಂಗಣ್ಣ ಒಬ್ಬರು. ಮೂರನೇ ಬಾರಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕರಡಿ ಸಂಗಣ್ಣ ಅವರಿಗೆ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಬೆಂಬಲಿಗರ ಸಮಾವೇಶ ಆಯೋಜಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇದಕ್ಕೆ ಬಿಜೆಪಿ ಸೆಡ್ಡು ಹೊಡೆದಿದ್ದು, ಬಿಜೆಪಿ ಹೈಕಮಾಂಡ್ಗೆ ಸೆಡ್ಡು ಹೊಡೆದ ಕರಡಿ ಸಂಗಣ್ಣ ಅವರು ಕೊಪ್ಪಳದಲ್ಲಿ ಸ್ವಾಭಿಮಾನದ ಹೆಸರಲ್ಲಿ ಬೆಂಬಲಿಗರ ಸಮಾವೇಶ ಆಯೋಜಿಸಿದ್ದು, ಇದನ್ನು ವಿಫಲಗೊಳಿಸಲು ಬಿಜೆಪಿ ನಾಯಕರು ತಂತ್ರಗಾರಿ ಮಾಡಿದ್ದಾರೆ. ಸಭೆಗೆ ಹೋಗದಂತೆ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳಿಗೆ ಮೌಖಿಕ ಸಂದೇಶ ನೀಡಿದ್ದಾರೆ. ಆ ಮೂಲಕ ಕರಡಿ ಸಂಗಣ್ಣ ಶಕ್ತಿ ಕುಂದಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಕೊಪ್ಪಳ ಲೋಕಸಭಾ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರೋ ಕರಡಿ ಸಂಗಣ್ಣ ಅವರು ಇಂದು ಕೊಪ್ಪಳ ನಗರದಲ್ಲಿ ಸ್ವಾಭಿಮಾನಿ ಸಮಾವೇಶ ಹೆಸರಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ. ಬಿಜೆಪಿ ಹೈಕಮಾಂಡ್ಗೆ ಸೆಡ್ಡು ಹೊಡೆದು ಸಭೆ ನಡೆಸಲು ಮುಂದಾಗಿರುವ ಸಂಗಣ್ಣ ಅವರು ಮುಂದಿನ ನಡೆ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆದಿದ್ದಾರೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.