ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೃದಯಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡದಿಂದ ಸುಮಾರು 2 ಗಂಟೆಗಳ ಕಾಲ ನಡೆದ ಹೃದಯಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಕಳೆದ ಮೂರು ದಿನಗಳ ಹಿಂದೆಯೇ ಹೆಚ್ಡಿಕೆ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಾಜಿ ಸಿಎಂ ಕುಮಾರಸ್ವಾಮಿಗೆ 3ನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ನೆರವೇರಿತು.
3ನೇ ಬಾರಿ ಹೃದಯಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೆಚ್ಡಿ ಕುಮಾರಸ್ವಾಮಿಯವರು ಆಸ್ಪತ್ರೆಗೆ ಸೇರುತ್ತಿದ್ದಂತೆ ಅಭಿಮಾನಿಗಳಲ್ಲಿ ಭಯ ಹೆಚ್ಚಾಗಿತ್ತು. ಹೀಗಾಗಿ ಕುಮಾರಸ್ವಾಮಿ ಶೀಘ್ರ ಗುಣಮುಖವಾಗುವಂತೆ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು.
ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಕುಮಾರಸ್ವಾಮಿ ಅಭಿಮಾನಿಗಳು ಹಾಗು ಜೆಡಿಎಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿ ಕುಮಾರಸ್ವಾಮಿ ಆರೋಗ್ಯ ಸುಧಾರಿಸಿ ಗುಣಮುಖರಾಗುವಂತೆ ಪ್ರಾರ್ಥಿಸಿದರು.
H.D.ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ ಹಿನ್ನೆಲೆ ಶಾಸಕರಾದ ಸಮೃದ್ಧಿ ಮಂಜು, ಹರೀಶ್ ಗೌಡ, ಸ್ವರೂಪ್ ಸೇರಿದಂತೆ JDS ನಾಯಕರು ಚೆನ್ನೈಗೆ ಆಗಮಿಸಿದ್ದಾರೆ. ಇನ್ನು ಮತ್ತೊಂದೆಡೆ ರಾಮನಗರ, ಮಂಡ್ಯ, ಹಾಸನ, ಮೃಸೂರು ಸೇರಿದಂತೆ ರಾಜ್ಯಾದ್ಯಂತ ಹೆಚ್ಡಿ ಕುಮಾರಸ್ವಾಮಿ ಅಭಿಮಾನಿಗಳು, ಬೆಂಬಲಿಗರು ಪ್ರಾರ್ಥನೆ ಸಲ್ಲಿಸಿದರು.
ಇನ್ನು ಮಂಡ್ಯದಲ್ಲೂ ಕೂಡ ಹೆಚ್ಡಿಕೆ ಶೀಘ್ರವಾಗಿ ಗುಣಮುಖರಾಗಲೆಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಜೆಡಿಎಸ್ ಕಾರ್ಯಕರ್ತರು ವಿದ್ಯಾಗಣಪತಿ ದೇವಸ್ಥಾನದಲ್ಲಿ ಹೆಚ್ಡಿಕೆ ಹೆಸರಲ್ಲಿ ಅರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಬೇಗನೆ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು.