ಧಾರವಾಡ: ಲಿಂಗಾಯತ ಮತಗಳು ಅಧಿಕವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಅಸೂಟಿ ಕಣದಲ್ಲಿದ್ದು, ಧಾರವಾಡ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ವೀರಶೈವ ಲಿಂಗಾಯತ ಸಮುದಾಯದ ಶಿರಹಟ್ಟಿ ಮಠದ ಪೀಠಾಧಿಪತಿ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಲಿಂಗಾಯತ ಸಮುದಾಯದ ಮುಖಂಡರು ಒತ್ತಡ ಹೇರುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಗದಗ ಜಿಲ್ಲೆಯ ಶಿರಹಟ್ಟಿ ಮಠದ ಪೀಠಾಧಿಪತಿಯಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಧಾರವಾಡ ಜಿಲ್ಲೆಯ ವಿವಿಧ ಗ್ರಾಮದ ಭಕ್ತರು ಒತ್ತಾಯಿಸಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಐದು ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತಗಳಿವೆ. ಇದೇ ಕಾರಣಕ್ಕೆ ಸ್ಪರ್ಧೆ ಮಾಡುವಂತೆ ಸ್ವಾಮೀಜಿಗೆ ವಿವಿದ ಲಿಂಗಾಯತ ಮುಖಂಡರು ಹಾಗೂ ಭಕ್ತರು ಒತ್ತಾಯಿಸುತ್ತಿದ್ದಾರೆ.
ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದ ಪ್ರಲ್ಹಾದ್ ಜೋಶಿಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸತತ ನಾಲ್ಕು ಬಾರಿ ಗೆದ್ದಿರುವ ಜೋಶಿಗೆ ಈ ಬಾರಿ ಮತ್ತೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಲಿಂಗಾಯತ ಮತಗಳು ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಹೈಕಮಾಂಡ್ ಬ್ರಾಹ್ಮಣ ಸಮುದಾಯದ ಜೋಶಿ ಅವರಿಗೆ ಮಣೆ ಹಾಕಿದ್ದಾರೆ.
ಕಳೆದ ತಿಂಗಳು ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಶಿರಹಟ್ಟಿ ಮಠದ ಪಕ್ಕೀರ ಸ್ವಾಮೀಜಿಗಳ 5555 ನಾಣ್ಯಗಳ ತುಲಾಭಾರ ಮಾಡಿದ್ದರು. ಇದಲ್ಲದೆ ಹುಬ್ಬಳ್ಳಿ ಸೇರಿ ವಿವಿಧ ಕಡೆ ಭಾವೈಕ್ಯತಾ ರಥಯಾತ್ರೆ ಮಾಡಿದ್ದರು. ಚುನಾವಣಾ ದೃಷ್ಟಿಯಿಂದಲೇ ದಿಂಗಾಲೇಶ್ವರ ಸ್ವಾಮೀಜಿ ಅವರು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಮಾಡಿದರಾ ಅನ್ನೋ ಅನುಮಾನ ಹುಟ್ಟುಹಾಕಿದೆ ಎಂದು ಮಾಹಿತಿ ಕಂಡು ಬಂದಿದೆ.