ಉಡುಪಿ ನಗರದಿಂದ ಸುಮಾರು ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ಕಾಪುವಿನ ಮಾರಿಗುಡಿ ದೇವಾಲಯದಲ್ಲಿ ಮಾರ್ಚ್ 26 ಮತ್ತು 27ರಂದು ಸುಗ್ಗಿ ಮಾರಿಪೂಜೆ ಕಾಲಾವಧಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೂರು ದೇವಾಲಯಗಳಲ್ಲಿ ( ಹಳೇ ಮಾರಿಗುಡಿ, ಹೊಸ ಮಾರಿಗುಡಿ, ಮೂರನೇ ಮಾರಿಗುಡಿ ಕಲ್ಯ ) ಈ ಸುಗ್ಗಿ ಮಾರಿಪೂಜೆ ಏಕಕಾಲದಲ್ಲಿ ನಡೆಯಲಿದೆ.ಸುಗ್ಗಿ ಮಾಸದಲ್ಲಿ ನಡೆಯುವ ಈ ಮಾರಿಪೂಜೆಗೆ ತುಳುನಾಡಿನಲ್ಲಿ ವಿಶೇಷ ಮಹತ್ವವಿದೆ. ಮಾರ್ಚ್ 26ರ ರಾತ್ರಿ ಎಂಟು ಗಂಟೆಗೆ ಹೂವಿನ ಪೂಜೆಯ ನಂತರ ಹಳೇ ಮಾರಿಗುಡಿಗೆ ಕಾಪು ವೆಂಕಟರಮಣ ದೇವಸ್ಥಾನದಿಂದ, ಹೊಸ ಮತ್ತು ಮೂರನೇ ಮಾರಿಗುಡಿಗೆ ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನದಿಂದ, ಮಾರಿಯಮ್ಮ ದೇವಿಯ ಬಿಂಬ, ನಗನಾಣ್ಯಗಳನ್ನು ಶೋಭಾಯಾತ್ರೆಯ ಮೂಲಕ ತಂದು ಗದ್ದುಗೆ ಏರಿಸಿದ ನಂತರ, ಸುಗ್ಗಿಪೂಜೆಯ ಕಾರ್ಯಕ್ರಮಕ್ಕೆ ಚಾಲನೆ ದೊರಕುತ್ತದೆ.
ಇಲ್ಲಿನ ಮಾರಿಯಮ್ಮನನ್ನು ಶಿರಸಿ – ಮೂಡಿಗೆರೆಯ ತನಕದ ಹದಿನಾರು ಮಾಗಳೆಯ ಅಪ್ಪೆ ( ಹದಿನಾರು ಗಡಿಯ ತಾಯಿ) ಎಂದೂ ಕರೆಯಲಾಗುತ್ತದೆ.ಕಾಪುವಿನ ಈ ಮಾರಿಗುಡಿ ದೇವಾಲಯದಲ್ಲಿ ನಡೆಯುವ ಆಟಿ, ಸುಗ್ಗಿ ಮತ್ತು ಜಾರ್ದೆ ಮಾರಿಪೂಜೆಗಳಲ್ಲಿ ಸುಗ್ಗಿಮಾರಿ ಪೂಜೆ ವಿಶೇಷವಾಗಿದೆ. ತುಳುನಾಡಿನ ಏಳು ಪ್ರಸಿದ್ದ ಜಾತ್ರೆಗಳಲ್ಲಿ ಕಾಪು ಸುಗ್ಗಿಮಾರಿ ಪೂಜೆ ಕೂಡಾ ಒಂದು. ಇತರ ಆರು ಜಾತ್ರೆಗಳೆಂದರೆ, ಉಡುಪಿ ಪರ್ಯಾಯ, ಬಪ್ಪನಾಡು ದುರ್ಗಾಪರಮೇಶ್ವರಿ ಡೋಲು ಜಾತ್ರೆ, ಮೂಲ್ಕಿ ಅರಸರ ಕಂಬಳ, ಕವತ್ತಾರು ಆಯನ, ಧರ್ಮಸ್ಥಳದ ಲಕ್ಷದೀಪೋತ್ಸವ, ಪಡುಬಿದ್ರೆಯ ಢಕ್ಕೆಬಲಿ ಸೇವೆ.
ಈ ಭಾಗದ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ ಎನ್ನುವುದು ಒಂದು ಕಡೆಯಾದರೆ, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುವ ಜಾತ್ರೆಯೂ ಇದಾಗಿದೆ. ಹಣ್ಣು ಕಾಯಿ, ಅಟ್ಟೆ ಮಲ್ಲಿಗೆ, ಜಾಜಿ, ಪಿಂಗಾರ ಹೂವುಹಣ್ಣು ವ್ಯಾಪಾರದ ಜೊತೆಗೆ, ಭರ್ಜರಿ ಆಡು, ಕೋಳಿ ವಹಿವಾಟೂ ನಡೆಯುತ್ತದೆ. ಮಾರಿಯಮ್ಮ ದೇವಿಯು ತುಳುವಿನಲ್ಲಿ ‘ಕಾಪುದ ಅಪ್ಪೆ’ (ಕಾಪುದ ತಾಯಿ), ತ್ರಯಂಬಕೇಶ್ವರಿ, ಮಂಗಳಾಂಬಿಕೆ ಎಂದೂ ಪೂಜಿಸಲ್ಪಡುತ್ತಾಳೆ.
ಮಾರ್ಚ್ 27ರ ದರ್ಶನ ಸೇವೆಯ ನಂತರ ಮಾರಿಯಮ್ಮ ದೇವಿಯ ಬಿಂಬವನ್ನು ವಿಸರ್ಜನೆ ಮಾಡಲಾಗುತ್ತದೆ.ಮೀನ, ಕರ್ಕಾಟಕ ಮತ್ತು ವ್ರಶ್ಚಿಕ ಮಾಸದ ಸಂಕ್ರಮಣದ ನಂತರ ಬರುವ ಮೊದಲ ಮಂಗಳವಾರದಿಂದ ಕಾಲಾವಧಿ ಮಾರಿಪೂಜೆಯ ಧಾರ್ಮಿಕ ಪ್ರಕ್ರಿಯೆ ಆರಂಭವಾಗುತ್ತದೆ. ಏಕಕಾಲದಲ್ಲಿ ನಡೆಯುವ ಈ ಸುಗ್ಗಿಪೂಜೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕಾಸರಗೋಡು, ಬೆಂಗಳೂರು, ಮುಂಬೈ, ಪೂನಾ ಸೇರಿದಂತೆ ಹಲವಾರು ಕಡೆಯಿಂದ ಲಕ್ಷಾಂತರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.