ಕಾರವಾರ: ಉತ್ತರ ಕನ್ನಡಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಯ್ಕೆ ಮಾಡಿರುವುದು ಸಮಾಧಾನ ತಂದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೋಗಲು ತುದಿಗಾಲಿನಲ್ಲಿ ನಿಂತಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪರೋಕ್ಷವಾಗಿ ತಿಳಿಸಿದರು.
ಶಿರಸಿಯಲ್ಲಿ ಮಾತನಾಡಿದ ಅವರು, ನನಗೆ ಸಮಾಧಾನವಾಗಿಲ್ಲ ಅಂದರೆ ಅವರು ಅಭ್ಯರ್ಥಿ ಬದಲಿಸ್ತಾರಾ ಎಂದು ಪ್ರಶ್ನಿಸಿದ್ದಾರೆ.
ಯಾರ ಪರ ಕೆಲಸ ಮಾಡಬೇಕೆಂದು ನಿರ್ಣಯಮಾಡಿ ಹೇಳುತ್ತೇನೆ. ಯಾರ ಸಮಾಧಾನ ಅಥವಾ ಅಸಮಾಧಾನವನ್ನು ಬಿಜೆಪಿ ಹೈಕಮಾಂಡ್ ಕೇಳುವುದಿಲ್ಲ. ಅವರ ಸಮಾಧಾನ ಹೇಗಿದೆಯೋ ಹಾಗೆ ನಿರ್ಣಯ ಮಾಡುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಹೆಬ್ಬಾರ್ ಅಸಮಾಧಾನ ಹೊರಹಾಕಿದ್ದಾರೆ.
ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸಭೆ ನಡೆಯುತ್ತಿದ್ದ ವೇಳೆ ಕೆಲವರು ಹೆಬ್ಬಾರ್ಗೆ ಸ್ವಾಗತ ಎಂದರೆ, ಹೆಚ್ಚಿನವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೆಬ್ಬಾರ್ ಬೆಂಬಲಿಗರು ಮತ್ತು ಕೈ ಕಾರ್ಯಕರ್ತರ ನಡುವೆ ಗಲಾಟೆಯೇ ನಡೆದಿದೆ.
ರಾಜ್ಯಸಭೆ ಚುನಾವಣೆಗೆ ಗೈರಾಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವಂತೆ ಮಾಡಿದ್ದ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೆಬ್ಬಾರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದರೂ ಶಿರಸಿ ಕೈ ಮುಖಂಡರು ಮತ್ತು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.