ಮೈಸೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸಚಿವರನ್ನೇ ಕಣಕ್ಕಿಳಿಸಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಲೆಗೆ ಹೆದರಿದ ಸಚಿವರು ಯಾರೊಬ್ಬರೂ ಸ್ಪರ್ಧಿಸಲು ಮುಂದೆ ಬರಲೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಪ್ರವಾಸದಲ್ಲಿರುವಾಗ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 18 ಮಂದಿ ಸಚಿವರನ್ನು ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಸಿಎಂ ಹಾಗೂ ಡಿಸಿಎಂ ಮುಂದಾಗಿದ್ದರು. ಆದರೆ, ಸೋಲಿನ ಭೀತಿಯಿಂದ ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎನ್ನುವ ರೀತಿಯಾಗಿದೆ. ಕಡಿಮೆ ಅವಧಿಯಲ್ಲಿ ‘ಕೈ’ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ ಎಂದರು.
ಬಿಜೆಪಿಯಲ್ಲಿನ ಬಂಡಾಯ ಬಗ್ಗೆ ಪ್ರತಿಕ್ರಿಯೆ ನೀಡಿ, ಇನ್ನು 4 ದಿನಗಳಲ್ಲಿ ಮ್ಯಾಜಿಕ್ ನಡೆಯುತ್ತದೆ ನೋಡುತ್ತಿರಿ ಎಂದು ಹೇಳಿದರು. ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಅವರದ್ದು ಸೇರಿದಂತೆ ಎಲ್ಲಾ ಬಂಡಾಯವೂ ಬಗೆಹರಿಯಲಿದೆ. ಇನ್ನು ನಾಲ್ಕು ದಿನಗಳಲ್ಲಿ ಎಲ್ಲ ಬಂಡಾಯವೂ ಬಗೆಹರಿಯುತ್ತದೆ. ಯಡಿಯೂರಪ್ಪ ಎಲ್ಲಾ ಕಡೆ ಹೋಗಿ ಬಂಡಾಯ ಶಮನ ಮಾಡುತ್ತಾರೆ. ನಾಲ್ಕು ದಿನಗಳಲ್ಲಿ ಆ ಚಮತ್ಕಾರ ನಡೆಯಲಿದೆ ನೋಡುತ್ತಾ ಇರಿ ಎಂದು ಅವರು ಹೇಳಿದ್ದಾರೆ.
ಯಾರ ಪರವಾಗಿಯೂ ಈ ಸರ್ಕಾರವಿಲ್ಲ ಎಂದು ಜನ ಬೇಸತ್ತಿದ್ದಾರೆ. ಜನಪ್ರಿತೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವೀಗ ನಮ್ಮ ಮುಖಂಡರನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಪಕ್ಷದ ಎಲ್ಲಾ ನಿರ್ಧಾರಗಳನ್ನು ನಾನಾಗಲೀ ಯಡಿಯೂರಪ್ಪನವರಾಗಲೀ ಕೈಗೊಳ್ಳುವುದಿಲ್ಲ. ಪಕ್ಷದ ವರಿಷ್ಠರ ನಿರ್ಧಾರಗಳೇ ಅಂತಿಮ. ನಮ್ಮ ಮಾತು ಕೇಳಿ ಪಕ್ಷದ ವರಿಷ್ಠರು ಎಲ್ಲ ನಿರ್ಧಾರ ಕೈಗೊಳ್ಳುತ್ತಿಲ್ಲ. ಪಕ್ಷದ ಹೈಕಮಾಂಡ್ ನಾಯಕರಿಗೆ ಎಲ್ಲವೂ ಸಹ ಗೊತ್ತಿದೆ. ಮೋದಿ ಅಲೆ ಮತ್ತು ನಾಯಕತ್ವಕ್ಕಾಗಿ ಎಲ್ಲರೂ ಕೆಲಸ ಮಾಡುತ್ತಾರೆ. ಪಕ್ಷದ ಎಲ್ಲಾ ನಾಯಕರು ಒಂದಾಗಿ ಕೆಲಸ ಮಾಡುತ್ತಾರೆ ಎಂದು ವಿಜಯೇಂದ್ರ ಭರವಸೆ ವ್ಯಕ್ತಪಡಿಸಿದರು.