ಬೆಳಗಾವಿ: ಹುಬ್ಬಳ್ಳಿ-ಧಾರವಾಡದ ಜನ ಹೊರ ಹಾಕಿದ್ದು, ಹೊರಗೆ ಹಾಕಿಸಿಕೊಂಡು ಇಲ್ಲಿ ಬಂದು ಮಾತನಾಡುತ್ತಿದ್ದಾರೆ. ಇದು ನನ್ನ ಕರ್ಮ ಭೂಮಿ ಅಂದ್ರೆ ಸುಮ್ಮನಿರಬೇಕಾ? ಹುಬ್ಬಳ್ಳಿಗೆ ನನ್ನ ಕರ್ಮಭೂಮಿ ಅಂದ್ರೆ ಆ ಜನ ಒಪ್ತಾರಾ? ನಾವೇನು ಹುಚ್ಚರಿದ್ದೇವಾ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಜನರನ್ನ ಬಕ್ರಾ ಮಾಡಲು ಬಂದಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಬೆಳಗಾವಿ ಜಿಲ್ಲೆಗೆ ಜಗದೀಶ್ ಶೆಟ್ಟರ್ ಕೊಡುಗೆ ಏನು? ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.
‘ಚುನಾವಣೆಗಾಗಿ ಕಾಂಗ್ರೆಸ್ ಕೇಸರಿ ಶಾಲಿನ ಮೊರೆ ಹೋಗಿದೆ’. ಇವೆಲ್ಲಾ ಚುನಾವಣೆ ವಿಚಾರಗಳೇ ಅಲ್ಲ. ಸಂಸದರು ಯಾರು, ಅವರ ಜವಾಬ್ದಾರಿ ಏನು ಜನ ತೀರ್ಮಾನಿಸುತ್ತಾರೆ. ಒಂದೇ ವರ್ಷದಲ್ಲಿ ಒಂದು ಸಾವಿರ ಕೋಟಿ ಅನುದಾನ ತಂದಿದ್ದೇನೆ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸಂಸತ್ತಿನಲ್ಲಿ ಜನರ ಧ್ವನಿಯಾಗಿ ಮಾತನಾಡುವ ನಾಯಕ ಬೇಕು ಎಂದು ತಿಳಿಸಿದರು.
ಬಿಜೆಪಿಯಿಂದ ಶೆಟ್ಟರ್ ಆರು ಬಾರಿ ಆರಿಸಿ ಬಂದಿದ್ದು, ಸಿಎಂ, ಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಜಿಲ್ಲೆ ಮತ್ತು ಕಾರ್ಯಕರ್ತರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಅವರ ಕಾರ್ಯಕರ್ತರೇ ಗೋಬ್ಯಾಕ್ ಎಂದು ಹೇಳುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ಬೇರೆ ರಾಜ್ಯದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಶೆಟ್ಟರ್, ಮೋದಿ ಹಾಗೂ ರಾಹುಲ್ ಗಾಂಧೀಯಷ್ಟು ದೊಡ್ಡವರಾ? ಜಿಲ್ಲೆಗೆ ಅವರ ಕೊಡುಗೆ ಏನೂ? ಕೊವಿಡ್ ಸಂದರ್ಭದಲ್ಲಿ ನಮಗೆ ಅಲಾಟ್ ಆಗಿದ್ದ ಆಕ್ಸಿಜನ್ ಹುಬ್ಬಳ್ಳಿ ಧಾರವಾಡಕ್ಕೆ ತಗೊಂಡು ಹೋಗಿದ್ದಾರೆ. ಇವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕರ್ಮಭೂಮಿಗೆ ಎಷ್ಟು ನ್ಯಾಯ ಒದಗಿಸಿದ್ದಾರೆ ಎಂದು ಸೂಚಿಸಿದರು.