ದೇವನಹಳ್ಳಿ: ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಬೆಂಗಳೂರಿಗೆ ಉಪನಗರಗಳಾಗಿ ಬೆಳೆಸುವ ಗುರಿ ನನ್ನದು. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಆದ್ದರಿಂದ ಈ ಬಾರಿಯೂ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಮಾತನಾಡಿ, ದೆಹಲಿಗೆ ಪರ್ಯಾಯವಾಗಿ ನೋಯ್ಡಾ ಇರುವಂತೆ ಬೆಂಗಳೂರಿಗೆ ಪರ್ಯಾಯವಾಗಿ ದೇವನಹಳ್ಳಿಯನ್ನು ಬೆಳೆಸುವ ಗುರಿ ನನ್ನದು. ಹಾಗೆಯೇ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಉಪನಗರಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಜೆಡಿಎಸ್ ಜೊತೆ ಸಮನ್ವಯ ತಂಡಗಳನ್ನು ರಚಿಸಿ, ಪ್ರತಿ ಹಂತದಲ್ಲೂ ತಂಡಗಳನ್ನು ರಚಿಸಿ ನಾವು ಕೆಲಸ ಮಾಡಬೇಕು. ಬಿಜೆಪಿ-ಜೆಡಿಎಸ್ ಒಳಗೊಂಡ ಬೃಹತ್ ಪ್ರಚಾರ ಸಭೆಯನ್ನೂ ನಡೆಸಬೇಕಿದೆ ಎಂದರು.
ನನ್ನನ್ನು ಆಯ್ಕೆ ಮಾಡಿದರೆ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ನೆರವಾಗಲಿದೆ. ಕಾಂಗ್ರೆಸ್‌ಗೆ ಮತ ಹಾಕಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ರಸ್ತೆ, ಸೇತುವೆ ನಿರ್ಮಿಸಿಲ್ಲ. ಎಲ್ಲಿಯೂ ಅಭಿವೃದ್ಧಿ ನಡೆಯುತ್ತಿಲ್ಲ. ಇದನ್ನು ಜನರಿಗೆ ತಿಳಿಸಬೇಕಿದೆ ಎಂದರು.
ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಜನ ಉತ್ಸುಕರಾಗಿದ್ದಾರೆ. ಐನೂರು ವರ್ಷಗಳಿಂದ ರಾಮ ಮಂದಿರ ಕೇವಲ ಕನಸಾಗಿತ್ತು. ಆದರೆ ಇದು ಬಿಜೆಪಿಗೆ ಕೇವಲ ರಾಜಕೀಯ ಲಾಭನಷ್ಟದ ವಿಚಾರವಲ್ಲ ಎನ್ನುವುದು ಮಂದಿರ ಲೋಕಾರ್ಪಣೆ ಮಾಡಿದ ಬಳಿಕ ಸಾಬೀತಾಗಿದೆ ಎಂದು ಸೂಚಿಸಿದರು.