ಬೆಂಗಳೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿರುವ ಕೆ.ಅಣ್ಣಾಮಲೈ ಈಗ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಇತ್ತೀಚೆಗೆ ಅವರು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಗೊತ್ತಿರುವ ಹಾಗೆ ಕೆ.ಅಣ್ಣಾಮಲೈ ಮೂಲತಃ ಐಪಿಎಸ್ ಅಧಿಕಾರಿಯಾಗಿದ್ದವರು. ಐಪಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ಅವರೀಗ ತಮಿಳುನಾಡಿಯಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಸಂದರ್ಶನದಲ್ಲಿ ಮಾತನಾಡಿದ ಅವರು, ಉಡುಪಿ ಎಸ್‌ಪಿಯಾಗಿದ್ದ ಸಂದರ್ಭದಲ್ಲಿ ಕುರಾನ್ ಹಾಗೂ ಹದೀಸ್‌ಅನ್ನು ನಾನು ಓದಿದ್ದೆ ಎನ್ನುವುದನ್ನೂ ತಿಳಿಸಿದ್ದಾರೆ. ಉಡುಪಿಯಲ್ಲಿ ಎಸ್‌ಪಿ ಆಗಿದ್ದಾಗ ನೀವು, ಇಸ್ಲಾಂನ ಕುರಾನ್ ಹಾಗೂ ಹದೀಸ್‌ಅನ್ನು ಓದಿದ್ದೀರಿ ಎಂದು ತಿಳಿಸಿದ್ದೀರಿ, ಇದರ ಬಗ್ಗೆ ಏನು ಹೇಳುತ್ತೀರಿ ಎನ್ನುವ ಪ್ರಶ್ನೆಗೆ, ‘ನನಗೆ ತುಂಬಾ ಆತ್ಮೀಯ ಮುಸ್ಲಿಂ ಸ್ನೇಹಿತರಿದ್ದಾರೆ. ಅವರು ನನಗೆ ಮಸೀದಿಗಳಿಗೂ ಆಹ್ವಾನಿಸಿದ್ದಾರೆ ಎಂದರು.
ರಂಜಾನ್ ಸಮಯದಲ್ಲಿ ಉಡುಗೊರೆಗಳನ್ನು ನೀಡುವ ಸಲುವಾಗಿ ನಾನು ಕೂಡ ಮಸೀದಿಗಳಿಗೆ ತೆರಳಿದ್ದೇನೆ. ಜಿಲ್ಲೆಯ ಎಸ್‌ಪಿಯಾಗಿ ನನಗೆ ಈ ಆಹ್ವಾನ ನೀಡಲಾಗುತ್ತಿತ್ತು. ಇದೇ ಸಮಯದಲ್ಲಿ ಕೇರಳದಲ್ಲಿ ಇಸ್ಲಾಮಿಕ್ ಸ್ಟೇಟ್ಸ್‌ಗೆ ಯುವಕರು ಸೇರುತ್ತಿದ್ದರು. ಕುಂದಾಪುರ, ಉಡುಪಿ, ಕೇರಳ ಭಾಗದಲ್ಲಿ ಇಂಥ ಸುದ್ದಿಗಳು ಬರುತ್ತಿದ್ದವು. ಇಸ್ಲಾಮಿಕ್ ಸ್ಟೇಟ್ಸ್‌ಗೆ ಇಲ್ಲಿನ ಯುವಕರು ಸೇರುತ್ತಿದ್ದಾರೆ ಎನ್ನುವ ವರದಿಗಳಿದ್ದವು.
ಈ ಹಂತದಲ್ಲಿ ನಮ್ಮ ಪೊಲೀಸ್ ಫೋರ್ಸ್ ಜೊತೆಗೆ ಜಿಲ್ಲೆಯ ಎಸ್‌ಪಿಯಾಗಿ ನಾನೇ ಒಂದು ನಿರ್ಧಾರ ಮಾಡಿದೆ. ಕರಾವಳಿ ಭಾಗದಲ್ಲಿ ಯಾವುದೇ ಮೂಲಭೂತವಾದಗಳು ಆಗಬಾರದು ಎಂದು ನಿರ್ಧಾರ ಮಾಡಿದ್ದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು ಹಾಗೂ ಕಾರವಾರ ಎಂದಿಗೂ ಇಂಥ ವಿಚಾರಗಳ ಹಾಟ್‌ಬೆಲ್ಟ್‌ಗಳು. ಕೇರಳ ಮಾಡೆಲ್‌ಗಳು ಕರ್ನಾಟಕದಲ್ಲಿ ಅದರಲ್ಲೂ, ಕರಾವಳಿಯಲ್ಲಿ ಆಗಲೇಬಾರದು ಎಂದು ನಿರ್ಧಾರ ಮಾಡಿದ್ದೆ ಎಂದು ಸೂಚಿಸಿದರು.