ಗದಗ: ಎಲ್ಲರನ್ನು ಬಡವರನ್ನಾಗಿ ಮಾಡಿ ಸಮಾನತೆ ತರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತತ್ವವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಲಕ್ಷ್ಮೇಶ್ವರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ” ಚುನಾವಣೆ ಪ್ರಚಾರದಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎಲ್ಲಾ ವರ್ಗದ ಜನರು ಬಹಿರಂಗವಾಗಿ ಬಂದು ಬೆಂಬಲ ಸೂಚಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ನಮಗೆ ಬೆಂಬಲ ಹೆಚ್ಚಾಗುತ್ತಿದೆ. ಜನರು ಸಹ ತೀರ್ಮಾನ ಮಾಡಿದ್ದಾರೆ ಅನಿಸುತ್ತದೆ. ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ ” ಎಂದರು.
ಇನ್ನು ಕಾಂಗ್ರೆಸ್ ಗ್ಯಾರಂಟಿ ಕುರಿತು ಖಾರವಾಗಿ ಮಾತನಾಡಿದ ಅವರು, ” ನಮ್ಮ ಗ್ಯಾರಂಟಿಗಳು ಶಾಶ್ವತವಾದ ಬದುಕು ಕಟ್ಟುವ ಗ್ಯಾರಂಟಿಗಳು. ಜನರಿಗೆ ಉದ್ಯೋಗ ಕೊಟ್ಟು, ಶಾಶ್ವತ ಬದುಕು ಕಟ್ಟುವ ಗ್ಯಾರಂಟಿಗಳು ” ಎಂದು ವಿವರಿಸಿದರು.
ಎಲ್ಲರ ಆರ್ಥಿಕ ಸಮೀಕ್ಷೆ ನಡೆಸಿ ಸಮಾನತೆ ತರುವ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಎರಡು ತರನಾದ ಸಮಾನತೆ ಇರುತ್ತದೆ. ಒಂದು ಬಡವರನ್ನು ಶ್ರೀಮಂತರನ್ನಾಗಿ ಮಾಡಿ ಸಮಾನತೆ ಮಾಡುವುದು. ಇನ್ನೊಂದು ಎಲ್ಲರನ್ನೂ ಬಡವರನ್ನಾಗಿ ಮಾಡುವ ಸಮಾನತೆ. ರಾಹುಲ್ ಗಾಂಧಿ ಎಲ್ಲರನ್ನೂ ಬಡವರನ್ನಾಗಿ ಮಾಡುವ ಸಮಾನತೆ ತತ್ವ ಹೊಂದಿದ್ದಾರೆ. ಅವರು ಹತಾಶರಾಗಿ ಅಸಂಬದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಘೋಷಣೆಯ ನಾರಿ ನ್ಯಾಯ ಗ್ಯಾರಂಟಿ ಬಗ್ಗೆ ಮಾತನಾಡಿ, ನಾರಿ ನ್ಯಾಯ ಗ್ಯಾರಂಟಿ ಇನ್ನೂ ಪ್ರಕಟ ಆಗಿಲ್ಲ. ಬಂದ ಮೇಲೆ ನೋಡೋಣ. ಜನರಿಗೆ ಜೀವ ಭದ್ರತೆ ಗ್ಯಾರಂಟಿ ಬೇಕಾಗಿದೆ. ಅದು ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಸಿಗುತ್ತಿದೆ. ಕಾಂಗ್ರೆಸ್ ಬಂದರೆ ಬರಗಾಲ ಎಂಬುದು ಶತ ಸಿದ್ಧವಾಗಿದೆ. ಇದನ್ನು ನಾವು ಹೇಳುವುದಿಲ್ಲ, ಜನರೇ ಹೇಳುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.