ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ’ ಮರಳಿ ಬಂದಿದೆ ಯುಗಾದಿ, ಮರಳಿ ಬರುವರು ಮೋದಿ ’ ಘೋಷವಾಕ್ಯದೊಂದಿಗೆ ಮಹಿಳೆಯರ ಪಾದಯಾತ್ರೆ ಆರಂಭವಾಗಲಿದೆ.
ಚುನಾವಣೆ ಎನ್ನುವ ಸಂವಿಧಾನದ ಉತ್ಸವವನ್ನು ಯುಗಾದಿ ಹಬ್ಬದ ಆಚರಣೆಗೆ ಜೋಡಿಸಿಕೊಂಡು ಪಾದಯಾತ್ರೆಗೆ ಅಂತಿಮ ರೂಪುರೇಷೆ ನೀಡಲಾಗಿದ್ದು, ಏಪ್ರಿಲ್ ಹತ್ತರಿಂದ ರಾಜ್ಯಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಪಾದಯಾತ್ರೆ ಆರಂಭವಾಗಲಿದೆ.
ಭೇಟಿ ಪಡಾವೋ ಭೇಟಿ ಬಚಾವೋ, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಿರುವುದಿದ್ದು, ಈ ಮುಂತಾದ ವಿಚಾರಗಳನ್ನು ತಮ್ಮ ಪಾದಯಾತ್ರೆಯ ವೇಳೆ, ವಿವರಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಸುಕನ್ಯಾ, ಉಜ್ವಲ ಯೋಜನೆ, ಸ್ವಚ್ಚಭಾರತ ಅಭಿಯಾನದಡಿ ಶೌಚಗೃಹ ನಿರ್ಮಾಣ ಇತ್ಯಾದಿ ಯೋಜನೆಗಳ ಬಗ್ಗೆಯೂ ಪಾದಯಾತ್ರೆಯಲ್ಲಿ ಜನರಿಗೆ ವಿವರಿಸಲಾಗುವುದಿದ್ದು, ಜೊತೆಗೆ ಪ್ರಧಾನಿಯವರ ಆಶಯದಂತೆ ಮನೆಮುಂದೆ ರಂಗೋಲಿ ಮತ್ತು ಮೆಹಂದಿಯಲ್ಲಿ ಕಮಲದ ಚಿಹ್ನೆ ಬಿಡಿಸಲು ಮಹಿಳೆಯರು ಮುಂದಾಗಿದ್ದಾರೆ.
ಯುಗಾದಿ ಹಬ್ಬದ ಮೂಡ್ ನಲ್ಲಿರುವ ಗ್ರಾಮಸ್ಥರಿಗೆ ವೋಟಿನ ಮಹತ್ವವನ್ನು ತಿಳಿಸುವುದರ ಜೊತೆಗೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆ, ಕೊಡುಗೆಯನ್ನು ಪ್ರತೀ ಮನೆಮನೆಗೆ ತಲುಪಿಸುವುದು ಈ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.