ಹಾವೇರಿ: ಕೆರೆಹೊಂಡ ನದಿಹಳ್ಳಕೊಳ್ಳಗಳು ಬರಿದಾಗಿದ್ದು ನೀರಿಗೆ ಆಹಾಕಾರ ಶುರುವಾಗಿದೆ. ರೈತರ ಬೆಳೆಗೆ ಇರಲಿ ಜಾನುವಾರುಗಳಿಗೆ ಕುಡಿಸಲು ನೀರಿಲ್ಲ. ಮೇವಿಲ್ಲದಂತಾಗಿದೆ. ರೈತರು ನಂಬಿದ್ದ ಕೊಳವೆ ಬಾವಿಗಳ ಆಳ ದಿನದಿಂದ ದಿನಕ್ಕೆ ಕೆಳಮಟ್ಟಕ್ಕೆ ಇಳಿಯುತ್ತಿದೆ. ಈ ರೀತಿಯ ವಾತಾವರಣದಲ್ಲಿ ಬಂಗಾರದಂತಹ ಬೆಳೆ ಬೆಳೆದಿದ್ದಾರೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಸಿದ್ದಾಪುರ ಗ್ರಾಮದ ಮಲ್ಲಿಕಾರ್ಜುನ ಹನುಮಂತಪ್ಪ ಕಚವಿ. ತಮ್ಮ ಒಂದು ಎಕರೆ ಅಡಿಕೆ ತೋಟದಲ್ಲಿ ಮೀಶ್ರ ಬೆಳೆಯಾಗಿ ಅನಾನಸ್ ಬೆಳೆದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಹಾವೇರಿ ಜಿಲ್ಲೆಯಲ್ಲಿ ಹವಾಗುಣ ಮೊದಲಿನಿಂದಲು ಅನಾನಸ್‌ಗೆ ಹೇಳಿ ಮಾಡಿಸಿದಂಥ ವಾತಾವರಣವನ್ನು ಹೊಂದಿಲ್ಲ. ಇಲ್ಲಿ ಅನಾನಸ್ ಬೆಳೆಯುವುದು ಕಷ್ಟಸಾಧ್ಯ ಎಂದು ತಿಳಿದು ಈ ಹಿಂದೆ ಹಲವು ರೈತರು ಕೈಚೆಲ್ಲಿದ್ದರು. ಆದರೆ ಮಲ್ಲಿಕಾರ್ಜುನ ಶಿವಮೊಗ್ಗ ಜಿಲ್ಲೆಯ ಉತ್ತರಕನ್ನಡ ಜಿಲ್ಲೆ ಮೂಲದ ರೈತರಾಗಿದ್ದು, ಅಲ್ಲಿ ಅಡಿಕೆ ಬೆಳೆಯುವ ಕಡೆ ಅನಾನಸ್ ಬೆಳೆ ಬೆಳೆದಿದ್ದನ್ನು ನೋಡಿದ್ದರು. ಈ ಕುರಿತಂತೆ ಮಾಹಿತಿ ಪಡೆದು ತಾವು ಸಹ ತಮ್ಮ ಜಮೀನಿನಲ್ಲಿ ಅನಾನಸ್ ಬೆಳೆಯಲು ಮುಂದಾದರು.
ಆ ಸಂದರ್ಭದಲ್ಲಿ ಅವರನ್ನು ತಡೆದವರೇ ಹೆಚ್ಚು. ಕೆಲವು ಕೃಷಿ ತಜ್ಞರು, ಸಂಬಂಧಿಕರು, ಗ್ರಾಮಸ್ಥರು ಅನಾನಸ್ ಬೆಳೆಯದಂತೆ ಸಲಹೆ ನೀಡಿದರು. ನಮ್ಮ ಬಿಸಿ ವಾತಾವರಣಕ್ಕೆ ಅನಾನಸ್ ಬರುವುದಿಲ್ಲ ಎಂದವರೇ ಅಧಿಕ. ಆದರೆ ಇದನ್ನು ಸವಾಲಾಗಿ ತೆಗೆದುಕೊಂಡ ಮಲ್ಲಿಕಾರ್ಜುನ್, ಒಂದು ಎಕರೆ ಅಡಿಕೆ ತೋಟದಲ್ಲಿ ಅನಾನಸ್ ಬೆಳೆಯಲು ಮುಂದಾದರು.
ಅನಾನಸ್ 18 ತಿಂಗಳ ಬೆಳೆ. ಆದರೆ ಬರಗಾಲ ಆವರಿಸಿದ್ದು ಮಲ್ಲಿಕಾರ್ಜುನಗೆ ಆತಂಕ ತಂದಿತ್ತು. ಆದರೆ ಎದೆಗುಂದದೆ ಮಲ್ಲಿಕಾರ್ಜುನ ತಮಗೆ ಇರುವ ಕೊಳವೆಬಾವಿಗಳ ನೀರನ್ನು ಸಮರ್ಪಕವಾಗಿ ಬಳಿಸಿ ಅಡಿಕೆ ತೋಟದಲ್ಲಿ ಅನಾನಸ್ ಬೆಳೆದರು. ಇವರ ಪರಿಶ್ರಮಕ್ಕೆ ಇದೀಗ ಒಂದು ಎಕರೆ ಅಡಿಕೆ ತೋಟದಲ್ಲಿ ಅನಾನಸ್ ಬೆಳೆದು ನಿಂತಿದೆ.
ಸ್ವತಃ ಮಲೆನಾಡಿದ ಜನರೇ ಇವರ ಅನಾನಸ್ ಬೆಳೆ ನೋಡಿ ಅಚ್ಚರಿ ಪಟ್ಟಿದ್ದಾರೆ. ಹಾವೇರಿ ಜಿಲ್ಲೆಗಿಂತ ಐದು ಡಿಗ್ರಿ 10 ಡಿಗ್ರಿ ಉಷ್ಣಾಂಶ ಕಡಿಮೆ ಇರುವ ಪ್ರದೇಶದಲ್ಲಿಯೇ ಈ ರೀತಿ ಇಳುವರಿ ಬರುವುದಿಲ್ಲ. ಅಂಥದ್ದರಲ್ಲಿ ಉತೃಷ್ಟವಾಗಿ ಅನಾನಸ್ ಬೆಳೆದಿರುವಿರೆಂದು ಬೇರೆ ಜಿಲ್ಲೆಯ ರೈತರು, ಮಲ್ಲಿಕಾರ್ಜುನ ಹನುಮಂತಪ್ಪ ಕಚವಿ ಅವರಿಗೆ ಶಹಬ್ಬಾಸಗಿರಿ ನೀಡಿದ್ದಾರೆ.