baಗದಗ: ಹತ್ತು ವರ್ಷ ಅಧಿಕಾರ ನಡೆಸಿದರೂ ದೇಶದಲ್ಲಿ ಪ್ರಧಾನಿ ಮೋದಿ ಪರ ಅಲೆ ಇದ್ದು, ದೇಶದ ಶೇ 75% ರಷ್ಟು ಜನರು ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಗುರುವಾರ ರೋಣ ತಾಲೂಕಿನ ಸವಡಿ, ಚಿಕ್ಕಮಣ್ಣೂರು, ಕುರಹಟ್ಟಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಈ ಚುನಾವಣೆ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಇಡೀ ದೇಶದ ಅಭಿವೃದ್ದಿ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವ ಚುನಾವಣೆ. ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷ ಅಧಿಕಾರ ನಡೆಸಿದ್ದಾರೆ. ಆದರೂ, ಅವರ ಪರ ಅಲೆ ಇದೆ. ಈ ದೇಶದ ಶೇ 75% ರಷ್ಟು ಜನರು ನರೇಂದ್ರ ಮೋದಿಯವರ ಪರವಾಗಿದ್ದಾರೆ. ಶೇ 25% ರಷ್ಟು ಜನರು ಅವರನ್ನು ವಿರೋಧಿಸುತ್ತಿದ್ದಾರೆ ಎಂದರು.
ಯಾವುದು ಅಸಾಧ್ಯವೊ ಅದನ್ನು ಸಾಧ್ಯ ಮಾಡುವುದೇ ಮೋದಿಯವರ ಜಾಯಮಾನ. ಜನರು ಕಷ್ಟದಲ್ಲಿದ್ದಾಗ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎನ್ನುವುದರ ಮೇಲೆ ಸರ್ಕಾರ ಜೀವಂತ ಇದಿಯೊ ಇಲ್ಲವೊ ಎನ್ನುವುದು ತಿಳಿಯುತ್ತದೆ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ನಾವು ತಿಂಗಳಲ್ಲಿ 17 ಲಕ್ಷ ಜನರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೇವು. ಕೇಂದ್ರದ ಕಡೆಗೆ ನೋಡದೆ ನಾವು ಮೊದಲು ಪರಿಹಾರ ನೀಡಿದೆವು. ಈಗಿನ ಸರ್ಕಾರ ಪರಿಹಾರ ನೀಡದೇ ಜನರಿಗೆ ಮೊಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಮೋದಿಯವರು ತಮ್ಮ ತಾಯಿ ತೀರಿ ಹೋದಾಗ ಕೇವಲ ಎರಡು ತಾಸಿನಲ್ಲಿ ಅವರ ಅಂತ್ಯ ಸಂಸ್ಕಾರ ಮುಗಿಸಿ ಮತ್ತೆ ದೇಶದ ಕರ್ತವ್ಯಕ್ಕೆ ಹಾಜರಾದರು. ದೇಶದ ಸಫಾಯಿ ಕರ್ಮಚಾರಿಗಳ ಪಾದಪೂಜೆ ಮಾಡಿದರು. ಇಡೀ ದೇಶದ ಜನಸಂಖ್ಯೆಯನ್ನು ಆಸ್ತಿಯನ್ನಾಗಿ ಪರಿಗಣಿಸಿ ದೇಶದ ಅಭಿವೃದ್ದಿಗೆ ಜನಸಂಖ್ಯೆ ಕಾರಣ ಅಂತ ಜಗತ್ತಿಗೆ ತೊರಿಸಿ ಕೊಟ್ಟರು. ಬಡತನ ದೊಡ್ಡ ಸಮಸ್ಯೆ ಅಂತ ಎಲ್ಲರೂ ಹೇಳುತ್ತಿದ್ದರು. ಮೋದಿಯವರು 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದರು.ದೇಶದ ಎಲ್ಲ ಮನೆಗಳಿಗೂ ಮನೆ ಮನೆಗೆ ಗಂಗೆ ಅಂತ ನಲ್ಲಿ ನೀರು ಕೊಡುತ್ತಿದ್ದಾರೆ ಎಂದು ತಿಳಿಸಿದರು.