ಬೆಂಗಳೂರು,:ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಾವುದೇ ಮೂಲಸೌಕರ್ಯ ಶುಲ್ಕವನ್ನು ವಿಧಿಸದೆ ಅಪಾರ್ಟ್ಮೆಂಟ್ಗಳಿಗೆ ಮತ್ತು ಬಡಾವಣೆಗಳಿಗೆ ಕಾವೇರಿ ನೀರುಸಂಪರ್ಕವನ್ನು ನೀಡುತ್ತಿದೆ. ಆದರೆ, ಜೆಪಿ ನಗರ 8 ನೇ ಹಂತದ ಪಿಎಚ್‌ಎಸ್‌ನ ರಾಯಲ್ ಲೇಕ್‌ಫ್ರಂಟ್ ನಿವಾಸಿಗಳಿಗೆ ಕಾವೇರಿ ನೀರು ಸಂಪರ್ಕ ಒದಗಿಸಲು 2.3 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎಂಬ ಆರೋಪ ಕೇಳಿಬಂದಿದೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಯಲ್ ಲೇಕ್‌ಫ್ರಂಟ್ ಅಪಾರ್ಟ್ಮೆಂಟ್ ನಿವಾಸಿಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದಾರೆ.
ಜಲ ಮಂಡಳಿಯು ರಾಯಲ್ ಲೇಕ್‌ಫ್ರಂಟ್ ರೆಸಿಡೆನ್ಸಿಯ ಸುತ್ತಮುತ್ತಲಿನ ಸ್ಥಳಗಳನ್ನು ಒಳಗೊಂಡಂತೆ ರೆವೆನ್ಯೂ ಮತ್ತು ‘ಬಿ-ಖಾತಾ’ ಲೇಔಟ್‌ಗಳ ನಿವಾಸಿಗಳಿಗೆ ಯಾವುದೇ ಮೂಲಸೌಕರ್ಯ ಶುಲ್ಕಗಳನ್ನು ವಿಧಿಸದೆಯೇ ಸಂಪರ್ಕ ಒದಗಿಸುತ್ತದೆ. ಆರ್ಎಲ್ಎಫ್ ಲೇಔಟ್ ನಮ್ಮ ಸುತ್ತಮುತ್ತಲಿನ ಜನರು ಬಳಸುವ ಉದ್ಯಾನವನಗಳಂತಹ ಸಾಮಾನ್ಯ ಮೂಲಸೌಕರ್ಯಗಳನ್ನು ಸಹ ಹೊಂದಿದೆ ಎಂದು ಪತ್ರದಲ್ಲಿ ನಿವಾಸಿಗಳು ಉಲ್ಲೇಖಿಸಿದ್ದಾರೆ.
ಏಪ್ರಿಲ್ 10 ರಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ರಾಯಲ್ ಲೇಕ್‌ಫ್ರಂಟ್ ರೆಸಿಡೆನ್ಸಿ ನಿವಾಸಿಗಳು ಮತ್ತು ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘವು ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದೆ. ಆ ಮೂಲಕ ಜಲಮಂಡಳಿಯ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದೆ.