ಬಳ್ಳಾರಿ: ವೀರಶೈವ ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸಲು ಸದಾ ಸಿದ್ಧನಾಗಿದ್ದೇನೆ. ಅದು ನನ್ನ ಜವಾಬ್ದಾರಿಯೂ ಹೌದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಗೆ ಭೇಟಿ ನೀಡಿ ಸಮುದಾಯದ ಮುಖಂಡರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ವೀರಶೈವ ಲಿಂಗಾಯತ ಸಮಾಜ ನನ್ನ ತಂದೆಯನ್ನು ಬೆಂಬಲಿಸಿ, ಬೆಳೆಸಿರುವುದನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ. ಯಡಿಯೂರಪ್ಪನವರು ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಲು ಇಡೀ ಸಮಾಜ ಬೆನ್ನಿಗೆ ನಿಂತಿತ್ತು. ನಾನು ಸಹ ನಿಮ್ಮ ಬೆಂಬಲ, ಸಹಕಾರ ಕೇಳುತ್ತಿದ್ದೇನೆ. ನಿಮ್ಮ ಸಹಕಾರ ಬಳ್ಳಾರಿಯಿಂದಲೇ ಶುರುವಾಗಲಿ. ಅಭ್ಯರ್ಥಿ ಶ್ರೀರಾಮುಲು ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಿಂದ ಮಹತ್ತರ ಕೊಡುಗೆ ನೀಡಿ ಎಂದು ಮನವಿ ಮಾಡಿದರು.
ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಬಹುದೊಡ್ಡ ಹಿನ್ನೆಲೆ ಹಾಗೂ ಪರಂಪರೆ ಇದೆ. ಲಕ್ಷಾಂತರ ಜನರ ಭವಿಷ್ಯ ರೂಪಿಸಿರುವ ಸಂಘದ ಸೇವೆ ಸದಾ ಸ್ಮರಣೀಯವಾಗಿದೆ. ವೀರಶೈವ ವಿದ್ಯಾವರ್ಧಕ ಸಂಘದಿಂದ ಮತ್ತಷ್ಟು ಜನಮುಖಿ ಕಾರ್ಯಗಳು ನಡೆಯುವಂತಾಗಲಿ ಎಂದು ಹಾರೈಸಿದರು.
ಈ ಬಾರಿಯ ಲೋಕಸಭಾ ಚುನಾವಣೆ ದೇಶಕ್ಕೆ ಹೊಸ ತಿರುವು ಕೊಡುವ ಮಹಾ ಚುನಾವಣೆಯಾಗಿದೆ. ಅತ್ಯಂತ ಪ್ರಜ್ಞಾವಂತ ಸಮುದಾಯವಾಗಿರುವ ವೀರಶೈವ ಲಿಂಗಾಯತರು ಬಿಜೆಪಿ ಬೆಂಬಲಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು. ದೇಶದ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಯೋಚಿಸುತ್ತಿರುವ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ಎಂಬುದು ಇಡೀ ದೇಶದ ಜನರ ಕನಸಾಗಿದೆ. ಈ ಕನಸು ನನಸಾಗಿಸಲು ನಿಮ್ಮ ಸಹಕಾರವೂ ಅಗತ್ಯ ಎಂದು ವೀರಶೈವ ಮುಖಂಡರಲ್ಲಿ ಮನವಿ ಮಾಡಿದರು.