ಹಾಸನ,: ‘ನನ್ನ ಅಳಿಯ ಎಂಬ ಕಾರಣಕ್ಕೆ ಡಾ. ಸಿಎನ್ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಜಯದೇವ ಸಂಸ್ಥೆಯನ್ನು ಇಡೀ ದೇಶದಲ್ಲಿ ಎತ್ತರಕ್ಕೆ ಬೆಳೆಸಿದ ಕೀರ್ತಿ ಅವರದ್ದಾಗಿದೆ. ಅವರು ನಮ್ಮ ಪಕ್ಷದಿಂದಲೇ ಸ್ಪರ್ಧಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.
ಆ ಅಣ್ಣ ತಮ್ಮರ ದೌರ್ಜನ್ಯ ಏನಿದೆ, ಅದನ್ನು ನಿಲ್ಲಿಸಲೇಬೇಕು ಎಂದು ಮಂಜುನಾಥ್ರನ್ನು ಕಣಕ್ಕಿಳಿಸಿದ್ದಾರೆ. ಅರ್ಥ ಮಾಡಿಕೊಳ್ಳಿ’ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಹೇಳಿದರು.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಂಚಿಗನಹಳ್ಳಿ ಗ್ರಾಮದಲ್ಲಿ ಪ್ರಜ್ವಲ್ ಪರ ಮತಯಾಚನೆ ಮಾಡಿದ ಅವರು, ಡಿಕೆ ಸಹೋದರರ ವಿರುದ್ಧವೂ ವಾಗ್ದಾಳಿ ನಡೆಸಿದರು.
ರೇವಣ್ಣ ದೊಡ್ಡ ವಿದ್ಯಾವಂತ ಅಲ್ಲ. ಅವನು ಕೇವಲ ಎಸ್ಎಸ್ ಎಲ್ಸಿ ಅಷ್ಟೆ. ಹಿಂದೆ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿದ್ದಾಗ ಎಷ್ಟು ಷರತ್ತು ಹಾಕಿದ್ದರು. ಕುಮಾರಸ್ವಾಮಿ ಸಾಲಮನ್ನಾ ಮಾಡುತ್ತೇನೆ ಅಂದರೆ ನಮ್ಮ ಯೋಜನೆಗೆ ಮೊದಲು ಹಣ ಇಡಿ ಎಂದರು. ಸಿಎಂ ಸಿದ್ದರಾಮಯ್ಯ ಏಪ್ರಿಲ್ 18 ಕ್ಕೆ ಬರ್ತಾರಂತೆ. ನಾನು ಅವರನ್ನೇ ಫಾಲೋ ಮಾಡ್ತೇನೆ, ಮಾತನಾಡಲಿ ನೊಡೋಣ ಎಂದು ದೇವೇಗೌಡರು ಸವಾಲು ಹಾಕಿದರು.
ಶಾಸಕ ಹೆಚ್ಡಿ ರೇವಣ್ಣ ಅವರನ್ನು ಹೊಗಳಿದ ದೇವೇಗೌಡರು, ರಾಜ್ಯದಲ್ಲಿ ಇಷ್ಟೊಂದು ಕೆಲಸ ಮಾಡುವ ಯಾವುದೇ ಶಾಸಕ ಇಲ್ಲ. ಯಾರಾದರು ಇದ್ದರೆ ಅವರು ನನ್ನ ಮುಂದೆ ಬಂದು ನಿಲ್ಲಬಹುದು. ನೀವು ಹಾಸನದ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಹೋಗಿ ಫೀಜ್ ಕೇಳಿ ಎಷ್ಟು ಹೇಳ್ತಾರೆ ನೋಡಿ ಎಂದರು.
ರೇವಣ್ಣ ತಮ್ಮ ಕ್ಷೇತ್ರದ ಮೊಸಳೆಹೊಸಳ್ಲಿಯಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು ಮಾಡಿದರು. ಹಳ್ಳಿಯಲ್ಲಿ ಕಾಲೇಜು ಬೇಡಾ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಹಠ ಹಿಡಿದು ಅಲ್ಲಿ ಕಾಲೇಜು ಸ್ಥಾಪನೆ ಮಾಡಿದರು. ಅಲ್ಲಿ ಕೇವಲ ಐದು ಸಾವಿರಕ್ಕೆ ಸೀಟ್ ಸಿಗುತ್ತದೆ ಎಂದು ಹೇಳಿದರು.