ತಿಪಟೂರು: ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಯಾವಾಗಲೂ ಕರ್ನಾಟಕದ ನೀರಾವರಿ, ಕೃಷಿ ಅಭಿವೃದ್ದಿ ಸೇರಿದಂತೆ ಎಲ್ಲದಕ್ಕೂ ವಿರೋಧಿಯಾಗಿ ನಡೆದುಕೊಂಡು ಬರುತ್ತಿರುವ ಸರ್ಕಾರವಾಗಿದ್ದು, ಮತ್ತೊಮ್ಮೆ ಮೋದಿಗೆ ಅಧಿಕಾರ ಸಿಕ್ಕಿದರೆ ಕರ್ನಾಟಕದ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ತಿಪಟೂರು, ತುರುವೇಕೆರೆ, ಗುಬ್ಬಿ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರವಾಗಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಸರ್ಕಾರ ೨ಬಾರಿ ಅಧಿಕಾರಕ್ಕೆ ಬರುವಾಗಲೂ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಪ್ರತಿಯೊ ಬ್ಬರ ಖಾತೆಗೂ ೧೫ ಲಕ್ಷ ಹಣ ಹಾಕುತ್ತೇವೆಂದು ಹಸಿ ಸುಳ್ಳು ಹೇಳಿದ್ದು ಬಿಟ್ಟರೆ ೧ ರೂಪಾಯಿ ಸಹ ಹಾಕಲಿಲ್ಲ. ೨ ಕೋಟಿ ಉದ್ಯೋಗ ನೀಡುತ್ತೇವೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಸುಳ್ಳು ಹೇಳಿ ಮತ ಪಡೆದು ಅಧಿಕಾರ ಅನುಭವಿಸಿ ಬಡವರನ್ನು ಬಡವರನ್ನಾಗಿಸುತ್ತಿದ್ದಾರೆ. ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿಸಿದ್ದೇ ಅವರ ೧೦ ವರ್ಷಗಳ ಬಹುದೊಡ್ಡ ಸಾಧನೆಯಾಗಿದೆ. ಈ ಬಾರಿ ಚುನಾವಣೆಗೆ ನಮ್ಮ ಗ್ಯಾರಂಟಿ ಪದ ಕದ್ದು ಇದು ನಮ್ಮ ಮೋದಿ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದು, ಬಿಜೆಪಿಯವರ ಮನೆ ದೇವರೇ ಸುಳ್ಳು ಎಂದು ತಿಳಿಸಿದರು.
ಕಳೆದ ಬಾರಿ ರಾಜ್ಯದಿಂದ ೨೫ ಬಿಜೆಪಿಯಿಂದ ಸಂಸದರು ಆಯ್ಕೆಯಾಗಿ ಸಂಸತ್‌ಗೆ ಹೋಗಿದ್ದರೂ ೫ ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅಭಿವೃದ್ಧಿ, ನೀರಾವರಿ, ಬರ ಸೇರಿದಂತೆ ಯಾವುದೇ ಯೋಜನೆಗಳಿಗೆ ಅನುದಾನ ನೀಡುವಂತೆ ಸಂಸತ್‌ನಲ್ಲಿ ಒಬ್ಬರೂ ಪ್ರಸ್ತಾಪಿಸಲಿಲ್ಲ. ಈ ಸಂಸದರೆಲ್ಲ ಮೋದಿ ಕಂಡರೆ ಗಡಗಡ ನಡುಗುತ್ತ ಪಕ್ಕಕ್ಕೆ ಸರಿಯುತ್ತಿದ್ದರು. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ, ಕರ್ನಾಟಕ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ಹಣವನ್ನೂ ನೀಡದೆ ವಂಚಿಸಿದ್ದಾರೆ. ಬರದಂತ ಪ್ರಮುಖ ಸಮಸ್ಯೆಗೂ ನಯಾಪೈಸೆ ಹಣ ನೀಡಿಲ್ಲದ ಇವರಿಗೆ ಯಾವುದೇ ಕಾರಣಕ್ಕೂ ಮತ ನೀಡಕೂಡದು ಎಂದು ವಿವರಿಸಿದರು.