ಕಲಬುರಗಿ: ಇದು ಅತ್ಯಂತ ಮಹತ್ವದ ಚುನಾವಣೆ. ಇದು ಕೇವಲ ನನ್ನ ಚುನಾವಣೆಯಲ್ಲ. ದೇಶ ಹಾಗೂ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆ. ಹಾಗಾಗಿ ಈ ಸಲ ತಮ್ಮನ್ನು ಆಯ್ಕೆ ಮಾಡಿ ಅಭಿವೃದ್ಧಿಗೆ ಸಹಕರಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು.
ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದ ಕಪನೂರು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮತಯಾಚಿಸಿ ಅವರು ಮಾತನಾಡುತ್ತಿದ್ದರು. ಕಳೆದ ಐದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿದ್ದು, ತಮಗೆ ಒಂದು ಅವಕಾಶ ನೀಡಿ ಸಂಸದರನ್ನಾಗಿ ಆಯ್ಕೆ ಮಾಡಿ ಕಳಿಸಿದರೇ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಅವರು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಂಸದರಾಗಿ ಆಯ್ಕೆಯಾಗಿ ಹೋದ ಮೇಲೆ ಉಮೇಶ ಜಾಧವ್ ಐದು ವರ್ಷದಲ್ಲಿ ಏನು ಕೆಲಸ ಮಾಡಿದ್ದೀರಿ ಅದರ ಲೆಕ್ಕ ಕೊಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ ಜನರಿಗೆ ಉತ್ತರ ನೀಡಲು ಅವರಿಂದ ಆಗುತ್ತಿಲ್ಲ ಹಾಗಾಗಿ ಹೋದಲೆಲ್ಲ ಅವರಿಗೆ ಗೋ ಬ್ಯಾಕ್ ಎಂದು ಅವರ ಪಕ್ಷದ ಕಾರ್ಯಕರ್ತರೇ ಕೂಗುತ್ತಿದ್ದಾರೆ ಎಂದರು.
ಮೋದಿ ಪರಿವಾರ ಎಂದು ಜಾಹೀರಾತು ನೀಡಿದ್ದನ್ನು ಪ್ರಸ್ತಾಪಿಸಿದ ಖರ್ಗೆ ಸ್ವಂತ ಪರಿವಾರವನ್ನೆ ನೋಡಿಕೊಳ್ಳಲು ಆಗದ ಮೋದಿ ದೇಶದ ಜನರನ್ನು ತಮ್ಮ ಪರಿವಾರ ಎಂದು ಕರೆದಿದ್ದಾರೆ ಎಂದು ಸಚಿವರು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗಿಳಿಸಿದ್ದು, ಅಗತ್ಯದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಸರಬರಾಜು ಮಾಡಲಿಲ್ಲ. ಆದರೂ ಕೂಡಾ ರಾಜ್ಯ ಸರ್ಕಾರ ಪ್ರತಿಯೊಬ್ಬರು ಅಕ್ಕಿ ಖರೀದಿ ಮಾಡಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದ್ದು, ಮಹಿಳೆಯರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ದೇವಾಲಯಗಳ ಹುಂಡಿ, ಅರ್ಚಕರ ಆರತಿ ತಟ್ಟೆ ಎರಡೂ ತುಂಬುತ್ತಿವೆ ಎಂದು ಸೂಚಿಸಿದರು.