ಬೆಂಗಳೂರು : ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಶುರುವಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಉತ್ಸಾಹದಿಂದ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಸಮಯ ಸಾಗುತ್ತಾ ತಾಪಮಾನ ಹೆಚ್ಚಳವಾಗುವ ಹಿನ್ನೆಲೆ ಬೆಳಗ್ಗೆಯಿಂದಲೇ ನಾಗರೀಕರು ಬಂದು ಮತ ಹಾಕುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದುವರೆಗೂ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.9.21ರಷ್ಟು ಮತದಾನವಾಗಿದ್ದು, ಬೆಳಗ್ಗೆ 9.30ರ ವೇಳೆಗೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಮತದಾನ ಆಗಿದ್ದು, ಇದುವರೆಗೂ 14.33ರಷ್ಟು ಮತದಾನ ಆಗಿದೆ.
ಕನಿಷ್ಠ ಪ್ರಮಾಣದ ಮತದಾನ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಆಗಿದ್ದು, ಇದುವರೆಗೂ ಶೇ.7.70 ರಷ್ಟು ವೋಟಿಂಗ್ ಆಗಿದೆ. ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.9.21ರಷ್ಟು ಮತದಾನ ಆಗಿದ್ದು, ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು 2,88,08,182 ಮತದಾರರು ಶುಕ್ರವಾರ ಮತದಾನಕ್ಕೆ ಅರ್ಹರಾಗಿದ್ದು, ಅದರಲ್ಲಿ ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರು 5,99,444 ಮಂದಿ ಇದ್ದಾರೆ. 14 ಲೋಕಸಭಾ ಕ್ಷೇತ್ರಗಳ ಪೈಕಿ ಕೋಲಾರ, ಚಾಮರಾಜನಗರ ಹಾಗೂ ಚಿತ್ರದುರ್ಗ ಎಸ್‌ಸಿ ಮೀಸಲು ಕ್ಷೇತ್ರಗಳಾಗಿವೆ.
ಕರಾವಳಿ ಕ್ಷೇತ್ರಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಉತ್ತಮವಾಗಿ ಮತದಾನ ನಡೆಯುತ್ತಿದೆ. ಆದರೆ, ಬೆಂಗಳೂರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಪ್ರಗತಿ ಕಂಡಿಲ್ಲ ಎನ್ನಬಹುದಾಗಿದ್ದು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಆರಂಭಿಕವಾಗಿ ಕಡಿಮೆ ಮತದಾನವಾಗಿದೆ.