ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಹಿಳೆಯರ ವಿಚಾರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಟಿ ಶ್ರುತಿ ಅವರಿಗೆ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದ್ದು, ಏಳು ದಿನದೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಶ್ರುತಿ ಅವರು ಇತ್ತೀಚೆಗೆ ಉಡುಪಿಯಲ್ಲಿಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ, ‘‘ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಉಚಿತ ಬಸ್ ಸೇವೆಯ ‘ಶಕ್ತಿ’ ಯೋಜನೆಯಿಂದ ಹೆಣ್ಣು ಮಕ್ಕಳು ತೀರ್ಥಯಾತ್ರೆಗೆ ಹೋಗುತ್ತೇವೆ ಎಂದು ಹೇಳಿ ಎಲ್ಲೆಲ್ಲೋ ಹೋಗುತ್ತಿದ್ದಾರೆ,’’ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಈ ಸಂಬಂಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರು ಶ್ರುತಿ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು.
ಈ ದೂರು ಆಧರಿಸಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೇ ಚೌಧರಿ ಅವರು ಶ್ರುತಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ನೋಟಿಸ್ ತಲುಪಿದ ಏಳು ದಿನದೊಳಗೆ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ನಾಗಲಕ್ಷ್ಮೇ ಚೌಧರಿ, ಮಹಿಳೆಯರನ್ನು ಅನುಮಾನಿಸುವ ಮತ್ತು ಅವಮಾನಿಸುವ ರೀತಿಯಲ್ಲಿಹೇಳಿಕೆ ಕೊಟ್ಟಿರುವ ಶ್ರುತಿ ರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.