ಚಿತ್ರದುರ್ಗ: ಲೋಕಸಭೆ ಚುನಾವಣೆಯ ರಾಜ್ಯದ ಮೊದಲ ಹಂತದ ಮತದಾನ ಜಿಲ್ಲೆಯಲ್ಲಿ ಆರಂಭವಾಗಿದ್ದು, ಬೆಳಗ್ಗೆ ಏಳು ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ಸೇರಿದಂತೆ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿತು ಎಂದು ಮಾಹಿತಿ ಕಂಡು ಬಂದಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಅಭ್ಯರ್ಥಿಗಳ ಮಧ್ಯೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ ಎನ್. ಚಂದ್ರಪ್ಪ ಹಾಗೂ ಎನ್‌ಡಿಎ ಮೈತ್ರಿ ಗೋವಿಂದ ಕಾರಜೋಳ ಅವರು ಅಖಾಡದಲ್ಲಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18 ಲಕ್ಷದ 45 ಸಾವಿರ ಮತದಾರರಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಗ್ರಾಮದ ಮಹಿಳೆಯರು ಖಾಲಿ ಕೋಡ ಹಿಡಿದು ನೀರು ಕೊಡೋವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ತಾಲೂಕಿನಲ್ಲಿ ವಿವಿಸಾಗರ ಜಲಾಶಯ ಇದ್ದರು ನಮ್ಮ ಗ್ರಾಮದಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಕುಡಿಯುವ ನೀರು ಪೂರೈಸುವವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನ ನಡೆಯುತ್ತಿದ್ದು, ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲೂಕಿನ ಮ್ಯಾಕ್ಲೂರಹಳ್ಳಿ ಭೋವಿ ಕಾಲೋನಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.