ಬೆಂಗಳೂರು: ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಸ್ ಪಕ್ಷದಿಂದ ಅಮಾನತು ಮಾಡಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ಡಿ ದೇವೇಗೌಡರಿಗೆ ಶಿಫಾರಸು ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಈ ಘೋಷಣೆಯನ್ನು ಮಾಡಿದ್ದಾರೆ. ಸದ್ಯ ಅಮಾನತು ಮಾಡಲಾಗುದ್ದು, ಎಸ್ಐಟಿ ತನಿಖೆಯಲ್ಲಿ ಆರೋಪ ಸಾಬೀತಾದರೆ ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದು ಎಂದರು.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಆರೋಪದ ಬಗ್ಗೆ ಎಸ್ಐಟಿ ತನಿಖೆಗೆ ಸ್ವಾಗತ ಮಾಡಿದ್ದೇವೆ. ತನಿಖಾ ವರದಿ ಬಂದಿಲ್ಲ. ತನಿಖೆಗೆ ನಾವು ವಿರುದ್ಧ ಹೇಳಿಕೆ ನೀಡುವುದಿಲ್ಲ. ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುವ ನಿರ್ಣಯ ಮಾಡಿದ್ದೇವೆ. ಮಹಿಳೆಯರಿಗೆ ಅಪಮಾನ ಆಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತು ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಂಡು ಶಿಫಾರಸ್ಸು ಮಾಡಿದ್ದೇವೆ ಎಂದರು.
ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಪ್ರಕರಣದಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಚರ್ಚೆ ನಡೆಯಿತು. ಹಾಗೂ ಏನು ತೀರ್ಮಾನ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ವ್ಯಕ್ತವಾದ ಒಕ್ಕೊರಳಿನ ಆಗ್ರಹದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸಲು ಶಿಫಾರಸ್ಸು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.