ಅಹಮದಾಬಾದ್: ಸಂವಿಧಾನದ ಅಡಿಯಲ್ಲಿ ನೀಡಲಾದ ಮೀಸಲು ವಿಚಾರದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಧರ್ಮದ ಆಧಾರದ ಮೇಲೆ ಮೀಸಲು ನೀಡಲ್ಲ ಎಂಬುದನ್ನು ಕಾಂಗ್ರೆಸ್ ಯುವರಾಜ ಜನರ ಮುಂದೆ ಘೋಷಣೆ ಮಾಡಲಿ,” ಎಂದು ರಾಹುಲ್ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸವಾಲು ಹಾಕಿದರು.
ತವರು ರಾಜ್ಯ ಗುಜರಾತ್‌ನ ಬನಸ್ಕಾಂತ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ರಾಲಿ ಉದ್ದೇಶಿಸಿ ಬುಧವಾರ ಮಾತನಾಡಿದ ಮೋದಿ ಅವರು, ”ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಧರ್ಮಾಧಾರಿತ ಮೀಸಲು ಕಲ್ಪಿಸಲು ಯೋಜನೆ ರೂಪಿಸಿಕೊಂಡಿದೆ. ಆದರೆ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾದ ಮೀಸಲು ವ್ಯವಸ್ಥೆ ರಕ್ಷಣೆಗೆ ಬಿಜೆಪಿ ಕಟಿಬದ್ಧವಾಗಿದೆ,” ಎಂದು ಭರವಸೆ ನೀಡಿದರು.
”ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ‘ಐಎನ್‌ಡಿಐಎ’ ಮೈತ್ರಿ ನಾಯಕರಿಗೆ ಧೈರ್ಯವಿದ್ದರೆ ದೇಶದಲ್ಲಿ ಧರ್ಮಾಧಾರಿತ ಮೀಸಲು ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರುವುದಿಲ್ಲ ಎಂದು ಲಿಖಿತವಾಗಿ ಜನತೆಗೆ ಭರವಸೆ ಕೊಡಲಿ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸವಾಲು ಹಾಕಿದರು.
”ದೇಶದಲ್ಲಿ 50 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್, ಹಲವು ವರ್ಷಗಳ ಆಡಳಿತ ನಡೆಸಿದ ಪ್ರತಿಪಕ್ಷಗಳು ಇಡೀ ದೇಶಕ್ಕೆ ಅನ್ವಯವಾಗುವ ರೀತಿಯಲ್ಲಿ ಸಂವಿಧಾನವನ್ನು ಎಂದಿಗೂ ಜಾರಿ ಮಾಡಲೇ ಇಲ್ಲ,” ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
”ಮೋದಿ ಜೀವಂತವಾಗಿ ಇರುವವರೆಗೂ ಸಂವಿಧಾನ ನೀಡಿರುವ ಮೀಸಲು ವಿಚಾರದಲ್ಲಿ ಯಾರಿಗೂ ಆಟವಾಡಲು ಬಿಡುವುದಿಲ್ಲ. ಧರ್ಮದ ಆಧಾರದಲ್ಲಿ ಮೀಸಲು ಕಲ್ಪಿಸಲು ಅವಕಾಶ ಕೊಡುವುದಿಲ್ಲ,” ಎಂದು ಮೋದಿ ಗುಡುಗಿದರು.